ನವದೆಹಲಿ: ಸಂಸತ್ ನ ಉಭಯ ಸದನಗಳಲ್ಲಿ ನಾಗಾಲ್ಯಾಂಡ್ ನಲ್ಲಿ ಸೇನೆಯಿಂದ ಪ್ರಜೆಗಳ ಹತ್ಯೆಯಾಗಿರುವ ಪ್ರಕರಣ ಸದ್ದು ಮಾಡುತ್ತಿದ್ದು, ಈ ವಿಷಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದಾರೆ.
"ಒಟಿಂಗ್ ಪ್ರದೇಶದಲ್ಲಿ ಉಗ್ರರ ಚಲನವಲನಗಳ ಬಗ್ಗೆ ಮಾಹಿತಿ ದೊರೆತಿತ್ತು. ಇದರ ಆಧಾರದಲ್ಲಿ 21 ಕಮಾಂಡೋಗಳು ಅಡಗಿ ಕುಳಿತು ಶಂಕಿತ ಪ್ರದೇಶದಲ್ಲಿ ದಾಳಿಗೆ ಸಜ್ಜುಗೊಂಡಿದ್ದರು. ಅದೇ ಸಮಯಕ್ಕೆ ವಾಹನವೊಂದು ಅಲ್ಲಿಗೆ ಬಂದಿದ್ದರಿಂದ ನಿಲ್ಲುವಂತೆ ಸೂಚನೆ ನೀಡಲಾಯಿತು. ಆದರೆ ಸೂಚನೆಯನ್ನೂ ಧಿಕ್ಕರಿಸಿ ಪರಾರಿಯಾಗಲು ಯತ್ನಿಸಿದಾದ ಆ ವಾಹನದಲ್ಲಿ ಉಗ್ರರನ್ನು ಸಾಗಿಸಲಾಗುತ್ತಿದೆ ಎಂಬ ಅನುಮಾನದೊಂದಿಗೆ ಸೇನೆ ದಾಳಿ ನಡೆಸಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
"ವಾಹನದಲ್ಲಿದ್ದ 8 ಮಂದಿಯ ಪೈಕಿ 6 ಮಂದಿ ಸಾವನ್ನಪ್ಪಿದ್ದಾರೆ. ಆದರೆ ಅದು ತಪ್ಪಾದ ಗುರುತಿಸುವಿಕೆಯಿಂದ ಆದ ಘಟನೆ ಎಂದು ನಂತರ ತಿಳಿಯಿತು. ಗಾಯಗೊಂಡ ಇಬ್ಬರನ್ನು ಸೇನೆ ಹತ್ತಿರದ ಆರೋಗ್ಯ ಕೇಂದ್ರಕ್ಕೆ ದಾಖಲಿಸಿತ್ತು ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ಸೇನೆಯನ್ನು ಸುತ್ತುವರೆದು ಎರಡು ವಾಹನಗಳಿಗೆ ಬೆಂಕಿ ಹಚ್ಚಿ ಸೇನಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ.
ತತ್ಪರಿಣಾಮ ಓರ್ವ ಯೋಧ ಸಾವನ್ನಪ್ಪಿದ್ದು ಹಲವು ಯೋಧರು ಗಾಯಗೊಂಡಿದ್ದಾರೆ. ಆತ್ಮರಕ್ಷಣೆಗಾಗಿ ಹಾಗೂ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಗುಂಡಿನ ದಾಳಿ ಮೊರೆ ಹೋಗಬೇಕಾಯಿತು. ಈ ವೇಳೆ 7 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಕೆಲವರಿಗೆ ಗಾಯಗಳಾಗಿವೆ ಸ್ಥಳೀಯ ಆಡಳಿತ ಹಾಗೂ ಪೊಲೀಸರು ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ಯತ್ನಿಸಿದ್ದಾರೆ" ಎಂದು ಅಮಿತ್ ಶಾ ಸದನದಲ್ಲಿ ಹೇಳಿಕೆ ನೀಡಿದ್ದಾರೆ.
Advertisement