
ನವದೆಹಲಿ: ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ 2019 ಡಿಸೆಂಬರ್ ನಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಹರ್ ಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಶರ್ಜೀಲ್ ಇಮಾಮ್ ಗೆ ದೆಹಲಿ ನ್ಯಾಯಾಲಯವೊಂದು ಗುರುವಾರ ಜಾಮೀನು ಮಂಜೂರು ಮಾಡಿದೆ.
25 ಸಾವಿರ ಮೊತ್ತದ ಬಾಂಡ್, ಒಬ್ಬರು ಶ್ಯೂರಿಟಿಯೊಂದಿಗೆ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ದಿನೇಶ್ ಕುಮಾರ್ ಜಾಮೀನು ಮಂಜೂರು ಮಾಡಿದರು. ಅಪರಾಧದ ಸ್ವರೂಪ ಮತ್ತು ತನಿಖೆಯ ಸಮಯದಲ್ಲಿ ಅವರನ್ನು ಬಂಧಿಸದಿರುವ ಅಂಶವನ್ನು ಪರಿಗಣಿಸಿ, ಜಾಮೀನು ಅರ್ಜಿಯನ್ನು ಅನುಮತಿಸಲಾಗಿದೆ ಎಂದು ನ್ಯಾಯಾಧೀಶರು ಆದೇಶಿಸಿದರು.
ಡಿಸೆಂಬರ್ 2019 ರಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ವಿದ್ಯಾರ್ಥಿಗಳ ಪ್ರತಿಭಟನೆಗೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯದಲ್ಲಿ ಹಿಂಸಾಚಾರ ಸಂಭವಿಸಿತ್ತು. ಐಪಿಸಿ ಸೆಕ್ಷನ್ 124 ಎ( ದೇಶದ್ರೋಹ) 153 ಎ( ಧರ್ಮ, ಬಣ್ಣ, ಹುಟ್ಟಿದ ಸ್ಥಳ, ನಿವಾಸ, ಭಾಷೆ, ಜಾತಿ, ಅಥವಾ ಸಮುದಾಯ ಮತ್ತಿತರ ಆಧಾರದ ಮೇಲೆ ಸೌಹಾರ್ದತೆಗೆ ಭಂಗ ತರುವ ವರ್ತನೆ) ಅಡಿಯಲ್ಲಿ ಶರ್ಜೀಲ್ ಇಮಾಮ್ ಮತ್ತಿತರರ ವಿರುದ್ಧ ದೆಹಲಿ ಪೊಲೀಸರು ಜನವರಿ 25, 2020 ರಲ್ಲಿ ಎಫ್ ಐಆರ್ ದಾಖಲಿಸಿದ್ದರು. ಜನವರಿ 28, 2020ರಲ್ಲಿ ಬಿಹಾರದ ಜಿಹಾನಾಬಾದ್ ನಿಂದ ಶರ್ಜೀಲಾ ಇಮಾಮ್ ಅವರನ್ನು ಬಂಧಿಸಲಾಗಿತ್ತು.
ಜಾಮೀಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯ ಪ್ರದೇಶದಲ್ಲಿ ಶರ್ಜೀಲ್ ಇಮಾಮ್ ಮಾಡಿದ್ದ ಪ್ರಚೋದನಾಕಾರಿ ಭಾಷಣವೇ ಹಿಂಸಾಚಾರಕ್ಕೆ ಕಾರಣ ಎಂಬ ದೆಹಲಿ ಪೊಲೀಸರು ಏಪ್ರಿಲ್ 2020ರಲ್ಲಿ ಆರೋಪಿಸಿದ್ದರು. ಜಾಮೀಯಾ ವಿವಿ ಮತ್ತು ಅಲಿಘಡದಲ್ಲಿ ಶರ್ಜೀಲ್ ಪ್ರಚೋದನಾಕಾರಿ ಭಾಷಣ ಮಾಡಿರುವುದಾಗಿ ದೆಹಲಿ ಅಪರಾಧ ವಿಭಾಗದ ಪೊಲೀಸರು ತನಿಖೆ ವೇಳೆ ಹೇಳಿದ್ದರು.
Advertisement