ಲವ್ ಜಿಹಾದ್ ಪ್ರಕರಣದ ಮೊದಲ ತೀರ್ಪು ಪ್ರಕಟ: ಕಾನ್ಪುರ ಯುವಕನಿಗೆ 10 ವರ್ಷ ಜೈಲು
ಕಾನ್ಪುರ: ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಕಾಯ್ದೆಯಡಿ ಮೊದಲ ತೀರ್ಪು ಪ್ರಕಟಿಸಲಾಗಿದ್ದು, ಕಾನ್ಪುರದ ಯುವಕನಿಗೆ 10 ವರ್ಷಗಳ ಜೈಲು ಶಿಕ್ಷೆ ಹಾಗೂ 30,000 ರೂಪಾಯಿ ದಂಡ ವಿಧಿಸಿ ಕಾನ್ಪುರ ನ್ಯಾಯಾಲಯ ತೀರ್ಪು ನೀಡಿದೆ.
ಈ ಘಟನೆ 2017ರ ಮೇ ತಿಂಗಳಲ್ಲಿ ನಡೆದಿತ್ತು. ಜಾವೇದ್ ಎಂಬ ಮುಸ್ಲಿಂ ಯುವಕ ತನ್ನನ್ನು ಹಿಂದೂ ಎಂದು ಪರಿಚಯಿಸಿಕೊಂಡು ಬಾಲಕಿಯೊಬ್ಬಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ನಂತರ ಆತ ಬಾಲಕಿಯನ್ನು ಕರೆದುಕೊಂಡು ಪರಾರಿಯಾಗಿದ್ದ. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮರು ದಿನ ಯುವಕನನ್ನು ಬಂಧಿಸಿದ್ದರು.
ತನ್ನ ಭಾವಿ ಗಂಡನ ಮನೆಗೆ ತೆರಳಿದ್ದಾಗ ಆತ ತನ್ನ ನಿಜವಾದ ಗುರುತನ್ನು ಬಹಿರಂಗಪಡಿಸಿ, ನಿಖಾ ಮಾಡಿಕೊಳ್ಳೊಣ ಎಂದು ಹೇಳಿದ್ದ, ಅದಕ್ಕೆ ತಾನು ನಿರಾಕರಿಸಿದೆ ಎಂದು ಬಾಲಕಿ ಪೊಲೀಸರಿಗೆ ದೂರು ನೀಡಿದ್ದರು.
ತನ್ನ ಮೇಲೆ ಯುವಕ ಅತ್ಯಾಚಾರ ನಡೆಸಿದ್ದಾನೆ ಎಂದು ಬಾಲಕಿ ಆರೋಪಿಸಿದ್ದಳು. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಮತಾಂತರ ನಿಷೇಧ ಸುಗ್ರಿವಾಜ್ಞೆ 2020 ಪ್ರಕಾರ ಸುಳ್ಳು ಹೆಸರು ಹೇಳಿಕೊಂಡು ಬಲವಂತ ಮಾಡುವುದು, ವಂಚನೆ ಮಾರ್ಗಗಳ ಮೂಲಕ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾತಂತರಗೊಳಿಸಬಾರದು ಎಂದು ಹೇಳುತ್ತದೆ. ವಿವಾಹದ ಮೂಲಕ ಯಾವುದೇ ವ್ಯಕ್ತಿ ಮತಾಂತರಕ್ಕೆ ಪ್ರೋತ್ಸಾಹಿಸಬಾರದು. ವಿವಾಹವಾಗಲು ಬಯಸುವ ಅಂತರ್ ಧರ್ಮೀಯ ಜೋಡಿಗಳು ಎರಡು ತಿಂಗಳ ಮುಂಚಿತವಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ತಿಳಿಸಬೇಕು.
ಬಲವಂತದ ಮತಾಂತರ ನಡೆಸಿದರೆ ಕನಿಷ್ಠ 15,000 ರೂ. ದಂಡದ ಜೊತೆಗೆ ಒಂದು ವರ್ಷದಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆ, ಎಸ್‌ಸಿ ಹಾಗೂ ಎಸ್‌ಟಿ ಸಮುದಾಯದ ಅಪ್ರಾಪ್ತರು/ಮಹಿಳೆಯರನ್ನು ಮತಾಂತರಿಸಿದರೆ ಮೂರರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
ಉತ್ತರ ಪ್ರದೇಶ ಪೊಲೀಸರು ಈ ಕಾಯ್ದೆಯಡಿ ಇದುವರೆಗೆ ಒಟ್ಟು 108 ಪ್ರಕರಣಗಳನ್ನು ದಾಖಲಿಸಿದ್ದಾರೆ. ಉತ್ತರ ಪ್ರದೇಶದ ಬರೇಲಿ ವಲಯದಲ್ಲಿ 28, ಮೀರತ್ ವಲಯದಲ್ಲಿ 23, ಗೋರಖ್‌ಪುರ ವಲಯದಲ್ಲಿ 11, ಲಖನೌ ವಲಯದಲ್ಲಿ 9, ಆಗ್ರಾ ವಲಯದಲ್ಲಿ 9 ಪ್ರಕರಣಗಳು ದಾಖಲಾಗಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ