ನವದೆಹಲಿ: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರಿಗೆ ತ್ರಿಪುರಾ ಸಿಎಂ ಬಿಪ್ಲಬ್ ಕುಮಾರ್ ದೇವ್ ಅತ್ಯುನ್ನತ ಗುಣಮಟ್ಟದ ಕ್ವೀನ್ ವೈವಿಧ್ಯದ ಅನಾನಸ್ ಹಣ್ಣುಗಳನ್ನು ಕಳಿಸಿಕೊಡಲಿದ್ದಾರೆ.
ಹಣ್ಣಿನ ರಾಜತಂತ್ರ ಇದಾಗಿದ್ದು, ಶೇಖ್ ಹಸೀನಾ ಅವರು ಬಿಪ್ಲಬ್ ಕುಮಾರ್ ದೇವ್ ಅವರಿಗೆ ಪ್ರಸಿದ್ಧ ಹರಿಭಂಗ ಮಾವಿನ ಹಣ್ಣುಗಳನ್ನು ಕಳಿಸಿಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಈಗ ತ್ರಿಪುರಾ ಮುಖ್ಯಮಂತ್ರಿಗಳು ತ್ರಿಪುರಾದ ಪ್ರಖ್ಯಾತ ಅನಾನಸ್ ಹಣ್ಣುಗಳನ್ನು ಕಳಿಸಿಕೊಡುವುದಕ್ಕೆ ಮುಂದಾಗಿದ್ದಾರೆ.
ಬಾಂಗ್ಲಾದೇಶದ ಸಹಾಯಕ ಹೈಕಮಿಷನರ್ ಮೊಹ್ಹಮದ್ ಜುಬೈದ್ ಹುಸೇನ್, ಜು.05 ರಂದು ತ್ರಿಪುರಾ ಮುಖ್ಯಮಂತ್ರಿಗಳಿಗೆ 300 ಕೆ.ಜಿ ಮಾವಿನ ಹಣ್ಣುಗಳನ್ನು ನೀಡಿದ್ದರು. ಬಾಂಗ್ಲಾದೇಶದ ಹರಿಭಂಗ ಮಾವು ಅಲ್ಲಿನ ರಂಗ್ಪುರ್ ಜಿಲ್ಲೆಯಲ್ಲಿ ಬೆಳೆಯುವ ವಿಶೇಷ ತಳಿಯ ಮಾವಿನ ಹಣ್ಣುಗಳಾಗಿವೆ.
"ಶೇಖ್ ಹಸೀನಾ ಅವರ ಉಡುಗೊರೆಗೆ ಪ್ರತಿಯಾಗಿ 100 ಪ್ಯಾಕ್ ಗಳಷ್ಟು ಕ್ವೀನ್ ಪೈನ್ ಆಪಲ್ (ಸುಮಾರು 650 ಕೆ.ಜಿ) ತೂಗುವ ಹಣ್ಣುಗಳನ್ನು ಬಾಂಗ್ಲಾದೇಶದಲ್ಲಿರುವ ಭಾರತದ ಹೈಕಮಿಷನ್ ಗೆ ತಲುಪಿಸಲಾಗುತ್ತದೆ.ಬಳಿಕ ಅದನ್ನು ಬಾಂಗ್ಲಾ ಪ್ರಧಾನಿಗೆ ನೀಡಲಾಗುತ್ತದೆ ಎಂದು ತ್ರಿಪುರಾ ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ.
1971 ರಲ್ಲಿ ಬಾಂಗ್ಲಾ ವಿಮೋಚನೆ ವೇಳೆ ತ್ರಿಪುರಾ ತನ್ನ ಜನಸಂಖ್ಯೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿದ್ದ ಬಾಂಗ್ಲಾ ನಿರಾಶ್ರಿತರಿಗೆ ಆಶ್ರಯ ನೀಡಿತ್ತು. ಶೇಖ್ ಹಸೀನಾ ಅವರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಈಶಾನ್ಯರಾಜ್ಯದೊಂದಿಗೆ ನಿಕಟ ಬಾಂಧವ್ಯ ಹೊಂದಲು ಯತ್ನಿಸುತ್ತಿದ್ದು, ತ್ರಿಪುರಾದೊಂದಿಗೆ ಭೂಮಾರ್ಗ, ರೈಲು ಸಂಪರ್ಕವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಬಾಂಗ್ಲಾ ಯತ್ನಿಸುತ್ತಿದೆ.
Advertisement