ಆಸ್ಟ್ರಾಜೆನೆಕಾ ಕೋವಿಶೀಲ್ಡ್ ಲಸಿಕೆ
ಆಸ್ಟ್ರಾಜೆನೆಕಾ ಕೋವಿಶೀಲ್ಡ್ ಲಸಿಕೆ

ಕೋವಿಶೀಲ್ಡ್ ಎರಡು ಡೋಸ್ ಗಳ ನಡುವಣ ಅಂತರ ತಗ್ಗಿಸಲು ದೆಹಲಿ ಹೈಕೋರ್ಟ್ ನಿರಾಕರಣೆ

ಕೋವಿಶೀಲ್ಡ್ ಡೋಸೇಜ್ ಅಂತರವನ್ನು ತಗ್ಗಿಸುವುದಕ್ಕೆ ನಿರ್ದೇಶನ ನೀಡಲು ಮನವಿ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
Published on

ನವದೆಹಲಿ: ಕೋವಿಶೀಲ್ಡ್ ಡೋಸೇಜ್ ಅಂತರವನ್ನು ತಗ್ಗಿಸುವುದಕ್ಕೆ ನಿರ್ದೇಶನ ನೀಡಲು ಮನವಿ ಮಾಡಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

50 ವರ್ಷದ ಮೇಲ್ಪಟ್ಟವರು ಹಾಗೂ ಬಹುವಿಧದ ಆರೋಗ್ಯ ಸಮಸ್ಯೆಯನ್ನು ಹೊಂದಿರುವವರಿಗೆ ಕೋವಿಶೀಲ್ಡ್ ನ ಡೋಸೇಜ್ ಅಂತರವನ್ನು 12-16 ರಿಂದ 8 ವಾರಗಳಿಗೆ ತಗ್ಗಿಸಲು ನಿರ್ದೇಶನ ನೀಡಬೇಕೆಂದು ಡಾ.ಸಿದ್ಧಾರ್ಥ್ ಡೆ ಅವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆಯನ್ನು ಜು.15 ರಂದು ನಡೆಸಿದೆ ಕೋರ್ಟ್ "ಈ ಸಂಬಂಧ ನೊಟೀಸ್ ಜಾರಿ ಮಾಡುವುದಿಲ್ಲ" ಎಂದು ಹೇಳಿ, ಅರ್ಜಿಯನ್ನು ಶುಲ್ಕ (ದಂಡ) ಸಹಿತ ವಜಾಗೊಳಿಸಿದೆ.   

"ಡೋಸೇಜ್ ಗಳ ಅಂತರವನ್ನು ನಿಗದಿಪಡಿಸುವ ವಿಧಾನದ ಬಗ್ಗೆ ನಿಮಗೆ ಅರಿವಿದೆಯೇ? ಡೋಸೇಜ್ ಗಳನ್ನು ಯಾರು ನಿಗದಿಪಡಿಸುತ್ತಿದ್ದಾರೆ? ನಮಗೆ ಆ ಅಧಿಕಾರವಿದ್ದರೆ ವಿಧಾನವನ್ನೇ ಬದಲಾವಣೆ ಮಾಡಬೇಕಾಗುತ್ತದೆ" ಎಂದು ಸಿದ್ಧಾರ್ಥ್ ಡೇ ಅವರ ಪರ ವಾದ ಮಂಡಿಸಿದ ವಕೀಲ ಕುಲ್ದೀಪ್ ಜೌಹರಿ ಅವರಿಗೆ ನ್ಯಾ.ಡಿ.ಎನ್ ಪಟೇಲ್, ನ್ಯಾ. ಜ್ಯೋತಿ ಸಿಂಗ್ ಅವರಿದ್ದ ಪೀಠ ಹೇಳಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜೌಹರಿ, ಕೋವಿಡ್-19 ಕಾರ್ಯನಿರತ ಗುಂಪು ಹಾಗೂ ತಜ್ಞ ಗುಂಪುಗಳು ಈ ಅಂಶದ ಬಗ್ಗೆ ಗಮನ ಹರಿಸಿದೆ ಎಂದು ಹೇಳಿದ್ದು, ತಮ್ಮ ವಾದದ ಸಮರ್ಥನೆಗೆ ಬ್ರಿಟನ್ ವಿಜ್ಞಾನಿಗಳ ಅಧ್ಯಯನವನ್ನು ಕೋರ್ಟ್ ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು.

"ಬ್ರಿಟನ್ ನ ವಿಜ್ಞಾನಿಗಳು ನಡೆಸಿರುವ ಅಧ್ಯಯನದ ಪ್ರಕಾರ ಕೋವಿಡ್-19 ನ ಹೊಸ ರೂಪಾಂತರಿಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಡೋಸೇಜ್ ಅಂತರವನ್ನು ಕಡಿಮೆ ಮಾಡುವ ಅಗತ್ಯವಿದೆ" ಎಂದು ಜೌಹರಿ ತಮ್ಮ ವಾದದಲ್ಲಿ ಕೋರ್ಟ್ ಗೆ ಮನವರಿಕೆ ಮಾಡಿಕೊಡಲು ಯತ್ನಿಸಿದರು. 

ಆದರೆ ಜೌಹರಿ ಅವರು ಮಂಡಿಸಿರುವ ವಾದ ಡೋಸೇಜ್ ಅಂತರ ತಗ್ಗಿಸುವ ವಿಚಾರದಲ್ಲಿ ಕೋರ್ಟ್ ಗೆ ಸ್ಪಷ್ಟವಾಗಿ ಮನವರಿಕೆಯಾಗಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ. "ಕೇವಲ ವಾದ ಮಾಡುವುದಕ್ಕಾಗಿಯಷ್ಟೇ ವಾದಿಸುತ್ತಿದ್ದೀರಿ, ನಮಗೆ ಮನವರಿಕೆಯಾಗಿಲ್ಲ" ಎಂದು ನ್ಯಾಯಪೀಠ ಹೇಳಿದೆ.

ಇದು ಪ್ರಮಾಣಿಕವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಜೌಹರಿ ಹೇಳಿದರು, "ಇದು ಪ್ರಮಾಣಿಕ ಪಿಐಎಲ್ ಎಂಬ ಬಗ್ಗೆ ಅನುಮಾನವಿಲ್ಲ. ಅರ್ಜಿ ವಜಾಗೊಳಿಸುವುದು ಅಪ್ರಾಮಾಣಿಕತೆಯ ಪ್ರಮಾಣಪತ್ರವೂ ಅಲ್ಲ ಎಂದು ಕೋರ್ಟ್ ಹೇಳಿದೆ. ಜೌಹರಿ ತಮ್ಮ ಅರ್ಜಿಯನ್ನು ಬೇಷರತ್ ಆಗಿ ಹಿಂಪಡೆದಿದ್ದಾರೆ. ಕೋವಿಶೀಲ್ಡ್ ನ ಎರಡು ಡೋಸ್ ಗಳ ಅಂತರವನ್ನು ಈಗ 12-16 ವಾರಗಳಿಗೆ ನಿಗದಿಪಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com