ಸ್ವಾತಂತ್ರ್ಯದ 75 ವರ್ಷಗಳು ಕಳೆದರೂ "ವಸಾಹತುಶಾಹಿ"ಯ ದೇಶದ್ರೋಹದ ಕಾನೂನು ಇನ್ನೂ ಏಕಿದೆ?: ಕೇಂದ್ರಕ್ಕೆ ಸುಪ್ರೀಂ
ನವದೆಹಲಿ: ದೇಶದ್ರೋಹದ ಕಾನೂನು ಇನ್ನೂ ಅಸ್ತಿತ್ವದಲ್ಲಿರುವುದರ ಕುರಿತು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
"ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಳಕೆ ಮಾಡಲಾಗುತ್ತಿದ್ದ ವಸಾಹತುಶಾಹಿ ಕಾನೂನು ಅದಾಗಿದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದ 75 ವರ್ಷಗಳೇ ಕಳೆದರೂ ಆ ಕಾನೂನನ್ನು ಇನ್ನೂ ಏಕೆ ರದ್ದುಗೊಳಿಸಿಲ್ಲ ಎಂದು ಸಿಜೆಐ ಎನ್ ವಿ ರಮಣ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಹಳೆಯದಾದ ಹಲವು ಕಾನೂನುಗಳನ್ನು ನಿಮ್ಮ ಸರ್ಕಾರ ರದ್ದುಗೊಳಿಸಿದೆ, ಆದರೆ ದೇಶದ್ರೋಹದ ಆರೋಪ ಹೊರಿಸಬಹುದಾದ ಐಪಿಸಿ ಸೆಕ್ಷನ್ 124A ನ್ನು ರದ್ದುಗೊಳಿಸುವುದಕ್ಕೆ ಏಕೆ ಗಮನಹರಿಸುತ್ತಿಲ್ಲ ಎಂಬುದು ತಿಳಿಯುತ್ತಿಲ್ಲ ಎಂದು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರನ್ನು ನ್ಯಾ.ಎನ್.ವಿ ರಮಣ ಪ್ರಶ್ನಿಸಿದ್ದಾರೆ.
ದೇಶದ್ರೋಹದ ಕಾನೂನು ವಸಾಹತುಶಾಹಿ ಕಾನೂನು. ಬ್ರಿಟಿಷರು ಇದೇ ಕಾನೂನನ್ನು ಬಳಸಿ ಮಹಾತ್ಮಾ ಗಾಂಧಿ, ಬಾಲಗಂಗಾಧರ ತಿಲಕ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಬಳಸುತ್ತಿದ್ದರು, ಈ ಮೂಲಕವೇ ದೇಶದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುತ್ತಿದ್ದರು.
ಸೆಕ್ಷನ್ 124A ನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದ್ದ ಅರ್ಜಿಯನ್ನು ಪರಿಗಣಿಸುವುದಾಗಿ ಸಿಜೆಐ ಹೇಳಿದ್ದಾರೆ. "ತಳಮಟ್ಟದಲ್ಲಿ ಪರಿಸ್ಥಿತಿ ಹದಗೆಟ್ಟಿದೆ. ಒಂದು ಪಕ್ಷಕ್ಕೆ ಮತ್ತೊಂದು ಪಕ್ಷ ಹೇಳುತ್ತಿರುವುದು ಇಷ್ಟವಾಗದೇ ಇದ್ದರೆ 124A ಸೆಕ್ಷನ್ ನ್ನು ಬಳಕೆ ಮಾಡಲಾಗುತ್ತಿದೆ. ಪಕ್ಷಗಳು, ವ್ಯಕ್ತಿಗಳು ಕಾರ್ಯನಿರ್ವಹಿಸುವುದಕ್ಕೆ ಇದು ಗಂಭೀರವಾದ ವಿಪತ್ತು ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

