
ನವದೆಹಲಿ: ಇತ್ತೀಚಿಗೆ ಕೇಂದ್ರ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಿಸಿತ್ ಪ್ರಮಾಣಿಕ್ ಬಾಂಗ್ಲಾದೇಶದ ಪ್ರಜೆ ಎಂಬ ಆರೋಪಗಳ ಬಗ್ಗೆ ತನಿಖೆ ನಡೆಸಬೇಕೆಂದು ರಾಜ್ಯಸಭಾ ಸದಸ್ಯ ಹಾಗೂ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಿಪುನ್ ಬೊರಾ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ಆದಾಗ್ಯೂ, ಪ್ರಮಾಣಿಕ್ ಅವರ ಆಪ್ತ ಮೂಲಗಳು ಈ ಆರೋಪಗಳನ್ನು ಬಲವಾಗಿ ತಿರಸ್ಕರಿಸಿದ್ದು, ಸಚಿವರು ಭಾರತದಲ್ಲಿಯೇ ಹುಟ್ಟಿ, ಬೆಳೆದಿದ್ದು, ಇಲ್ಲಿಯೇ ಶಿಕ್ಷಣ ಪಡೆದಿದ್ದಾರೆ ಎಂದು ಹೇಳಿವೆ. ಪ್ರಧಾನಿಗೆ ಬರೆದಿರುವ ಪತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬೊರಾ, ಬಾರಕ್ ಬಾಂಗ್ಲಾ, ರಿಪಬ್ಲಿಕ್ ಟಿವಿ ತ್ರಿಪುರಾ ಮತ್ತು ಡಿಜಿಟಲ್ ಮೀಡಿಯಾ, ಇಂಡಿಯಾ ಟುಡೇ, ಬ್ಯುಸಿನೆಸ್ ಸ್ಟಾಡರ್ಡ್ ಸುದ್ದಿ ಚಾನೆಲ್ ಗಳಲ್ಲಿ ಪ್ರಮಾಣಿಕ್ ಬಾಂಗ್ಲಾದೇಶದವರು ಎಂಬುದಾಗಿ ವರದಿಯಾಗಿರುವುದಾಗಿ ತಿಳಿಸಿದ್ದಾರೆ.
ಬಾಂಗ್ಲಾದೇಶದ ಗೈಬಂಧ ಜಿಲ್ಲೆಯ ಹರಿಣತಪುರ ಸಚಿವರ ಹುಟ್ಟೂರಾಗಿದ್ದು, ಕಂಪ್ಯೂಟರ್ ಅಧ್ಯಯನಕ್ಕಾಗಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದಾಗಿ ವರದಿಯಾಗಿರುವುದಾಗಿ ರಿಪುನ್ ಬೊರಾ ಹೇಳಿದ್ದಾರೆ. ಕಂಪ್ಯೂಟರ್ ಡಿಗ್ರಿ ಪಡೆದ ನಂತರ ಮೊದಲಿಗೆ ಅವರು ಟಿಎಂಸಿಗೆ ಸೇರ್ಪಡೆಯಾದರು ತದನಂತರ ಬಿಜೆಪಿ ಸೇರಿ ಕೊಚ್ ಬೆಹಾರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವುದಾಗಿ ತಿಳಿಸಿದ್ದಾರೆ.
ನಾಮಪತ್ರದಲ್ಲಿ ಪ್ರಮಾಣಿಕ್ ಕೊಚ್ ಬೆಹಾರ್ ವಿಳಾಸ ನೀಡಿದ್ದು, ಅವರು ಚುನಾವಣೆಯಲ್ಲಿ ಗೆದ್ದು ಗೃಹ ಸಚಿವಾಲಯದ ರಾಜ್ಯ ಖಾತೆ ವಹಿಸಿಕೊಂಡ ನಂತರ ಬಾಂಗ್ಲಾದೇಶದಲ್ಲಿನ ಅವರ ಹುಟ್ಟೂರಿನ ಕೆಲ ಗ್ರಾಮಸ್ಥರು ಮತ್ತು ಅವರ ಹಿರಿಯ ಸಹೋದರ ಸಂತೃಪ್ತಿ ವ್ಯಕ್ತಪಡಿಸಿರುವುದಾಗಿ ನ್ಯೂಸ್ ಚಾನೆಲ್ ಗಳು ವರದಿ ಮಾಡಿರುವುದಾಗಿ ಬೊರಾ ಹೇಳಿದ್ದಾರೆ. ಇದು ಗಂಭೀರ ವಿಚಾರವಾಗಿದ್ದು, ಪ್ರಮಾಣಿಕ್ ಅವರ ರಾಷ್ಟ್ರೀಯತೆ ಬಗ್ಗೆ ಪ್ರಾಮಾಣಿಕತೆಯಿಂದ ತನಿಖೆ ನಡೆಸಬೇಕು ಎಂದು ಪ್ರಧಾನಿಗೆ ಬರೆದಿರುವ ಪತ್ರದಲ್ಲಿ ಬೊರಾ ಹೇಳಿದ್ದಾರೆ.
Advertisement