ಪೆಗಾಸಸ್ ಸ್ಪೈವೇರ್ ಟಾರ್ಗೆಟ್ ಪಟ್ಟಿಯಲ್ಲಿ ಉದ್ಯಮಿ ಅಂಬಾನಿ ಹೆಸರು: ವರದಿ

ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಮೂಲಕ ಗೂಢಚರ್ಯೆಯ ಟಾರ್ಗೆಟ್ ಪಟ್ಟಿಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಅವರ ಹೆಸರೂ ಇದ್ದದ್ದು ಈಗ ಬಹಿರಂಗವಾಗಿದೆ. 
ಹ್ಯಾಕಿಂಗ್ (ಸಾಂಕೇತಿಕ ಚಿತ್ರ)
ಹ್ಯಾಕಿಂಗ್ (ಸಾಂಕೇತಿಕ ಚಿತ್ರ)

ನವದೆಹಲಿ: ಪೆಗಾಸಸ್ ತಂತ್ರಾಂಶದ ಮೂಲಕ ಗೂಢಚರ್ಯೆಯ ಟಾರ್ಗೆಟ್ ಪಟ್ಟಿಯಲ್ಲಿ ಉದ್ಯಮಿ ಅನಿಲ್ ಅಂಬಾನಿ ಅವರ ಹೆಸರೂ ಇದ್ದದ್ದು ಈಗ ಬಹಿರಂಗವಾಗಿದೆ. 

ಇಸ್ರೇಲಿ ಸ್ಪೈವೇರ್ ಪೆಗಾಸಸ್ ನಲ್ಲಿ ಸಂಭಾವ್ಯ ಟಾರ್ಗೆಟ್ ಗಳಾಗಿದ್ದ ಪಟ್ಟಿಯಲ್ಲಿ ಅನಿಲ್ ಧೀರೂಭಾಯ್ ಅಂಬಾನಿ (ಎಡಿಎ) ಗ್ರೂಪ್ ನ ಹಿರಿಯ ಅಧಿಕಾರಿ ಹಾಗೂ ಅನಿಲ್ ಅಂಬಾನಿಯ ಫೋನ್ ನಂಬರ್ ಗಳಿರುವುದು ಹೊಸದಾಗಿ ಬೆಳಕಿಗೆ ಬಂದಿದೆ. 

ಜು.22 ರಂದು ಬಿಡುಗಡೆಯಾದ ಪಟ್ಟಿಯಲ್ಲಿ ಈ ಹೆಸರುಗಳು ಬಹಿರಂಗಗೊಂಡಿದ್ದು, ಸೋರಿಕೆಯಾಗಿರುವ ಪೆಗಾಸಸ್ ಪ್ರಾಜೆಕ್ಟ್ ಒಕ್ಕೂಟದ ಮಾಧ್ಯಮ ಪಾಲುದಾರರು ವಿಶ್ಲೇಷಿಸಿದ ಪಟ್ಟಿಯಲ್ಲಿದೆ ಎಂದು ತಿಳಿದುಬಂದಿದೆ. 

ಅಂಬಾನಿಯ ಹೊರತಾಗಿ ಕಾರ್ಪೊರೇಟ್ ಕಮ್ಯುನಿಕೇಷನ್ಸ್ ಮುಖ್ಯಸ್ಥ ಟೋನಿ ಜೇಸುದಾಸನ್ ಹಾಗೂ ಜೇಸುದಾಸನ್ ಅವರ ಪತ್ನಿ ಅವರ ಹೆಸರೂ ಇದೆ. ಆದರೆ ಪಟ್ಟಿಯಲ್ಲಿರುವ ನಂಬರ್ ನ್ನೇ ಅಂಬಾನಿ ಈಗಲೂ ಬಳಕೆ ಮಾಡುತ್ತಿದ್ದಾರಾ? ಎಂಬುದು ದೃಢಪಟ್ಟಿಲ್ಲ. 

ಈ ವಿಷಯವಾಗಿ ಎಡಿಎಜಿ ಸಂಸ್ಥೆಯಿಂದ ತಕ್ಷಣಕ್ಕೆ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಭಾರತದಲ್ಲಿರುವ ಡಸಾಲ್ಟ್ ಏವಿಯೇಷನ್ ನ ಪ್ರತಿನಿಧಿ ವೆಂಕಟ ರಾವ್ ಪೊಸಿನಾ, ಸಾಬ್ ಇಂಡಿಯಾ ಮುಖ್ಯಸ್ಥರಾಗಿದ್ದ ಇಂದ್ರಜಿತ್ ಸೈಲ್ ಹಾಗೂ ಬೋಯಿಂಗ್ ಇಂಡಿಯಾದ ಮುಖ್ಯಸ್ಥ ಪ್ರಯುಷ್ ಕುಮಾರ್ ಅವರ ಹೆಸರುಗಳು ಸೋರಿಕೆಯಾಗಿರುವ ಡೇಟಾಬೇಸ್ ನಲ್ಲಿ 2018-19 ರ ವಿವಿಧ ಅವಧಿಗಳಲ್ಲಿ ಪತ್ತೆಯಾಗಿದೆ. 

ಫ್ರೆಂಚ್ ನ ಇಂಧನ ಸಂಸ್ಥೆ ಇಡಿಎಫ್ ನ ಮುಖ್ಯಸ್ಥ ಹರ್ಮನ್ಜಿತ್ ನೇಗಿ ಅವರ ಹೆಸರೂ ಈ ಪಟ್ಟಿಯಲ್ಲಿ  ಬಹಿರಂಗಗೊಂಡಿದೆ. ಆದರೆ ಅವರು ಈ ಅವಧಿಯಲ್ಲಿ ಫ್ರಾನ್ಸ್ ನ ಅಧ್ಯಕ್ಷ ಇಮ್ಯಾನುಯೆಲ್ ಮೆಕ್ರೋನ್ ಭಾರತಕ್ಕೆ ಭೇಟಿ ನೀಡಿದ್ದಾಗ ಅವರ ನಿಯೋಗದಲ್ಲಿದ್ದರು ಎಂಬ ಕಾರಣಕ್ಕೆ ಆಯ್ಕೆಯನ್ನು ನೀಡಲಾಗಿತ್ತು. 

ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಮೂಲಕ ಭಾರತದಲ್ಲಿನ 40 ಕ್ಕೂ ಹೆಚ್ಚಿನ ಪತ್ರಕರ್ತರನ್ನು ಟಾರ್ಗೆಟ್ ಮಾಡಲಾಗಿದೆ ಎಂಬ ಮಾಹಿತಿ ಭಾನುವಾರ ಬಹಿರಂಗಗೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com