ಲಸಿಕೆ ನೀತಿ ಮೇಲ್ನೋಟಕ್ಕೆ ನಿರಂಕುಶ ಆಡಳಿತದಂತೆ ಕಂಡುಬರುತ್ತಿದೆ, ವಿವರಣೆ ಕೊಡಿ: ಕೇಂದ್ರದ ಮೇಲೆ 'ಸುಪ್ರೀಂ' ಕೆಂಗಣ್ಣು

ಆಡಳಿತಾತ್ಮಕ ನೀತಿಗಳು ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದಾಗ ನ್ಯಾಯಾಲಯ ಅದನ್ನು ಮೂಕ ಪ್ರೇಕ್ಷಕನಂತೆ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಲಸಿಕೆ ನೀತಿ ಬಗ್ಗೆ ಮತ್ತೆ ಛೀಮಾರಿ ಹಾಕಿದೆ.
ಅಶಕ್ತ ಮಹಿಳೆಯೊಬ್ಬರಿಗೆ ಮನೆಯಲ್ಲಿಯೇ ಲಸಿಕೆ ನೀಡುತ್ತಿರುವುದು
ಅಶಕ್ತ ಮಹಿಳೆಯೊಬ್ಬರಿಗೆ ಮನೆಯಲ್ಲಿಯೇ ಲಸಿಕೆ ನೀಡುತ್ತಿರುವುದು
Updated on

ನವದೆಹಲಿ: ಆಡಳಿತಾತ್ಮಕ ನೀತಿಗಳು ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸಿದಾಗ ನ್ಯಾಯಾಲಯ ಅದನ್ನು ಮೂಕ ಪ್ರೇಕ್ಷಕನಂತೆ ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಲಸಿಕೆ ನೀತಿ ಬಗ್ಗೆ ಮತ್ತೆ ಛೀಮಾರಿ ಹಾಕಿದೆ.

18ರಿಂದ 44 ವರ್ಷದೊಳಗಿನವರಿಗೆ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳು ಲಸಿಕೆಗೆ ದರ ವಿಧಿಸುವುದು ಮೇಲ್ನೋಟಕ್ಕೆ ಅನಿಯಂತ್ರಿತ ಮತ್ತು ವಿಚಾರಹೀನವೆಂದು ಕಂಡುಬರುತ್ತಿದೆ. ಮೊದಲ ಎರಡು ಹಂತಗಳಲ್ಲಿ ಲಸಿಕೆಯನ್ನು ಉಚಿತವಾಗಿ ನೀಡಲಾಗಿದ್ದು ಈಗ ದರ ವಿಧಿಸಿದರೆ ಹೇಗೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ನಿನ್ನೆ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಿದೆ.

ವಿವರಣೆ ಕೊಡಿ: ಸರ್ಕಾರದ ಲಸಿಕೆ ನೀತಿ ಬಗ್ಗೆ ವಿಸ್ತೃತವಾಗಿ ವಿವರಣೆ ಕೇಳಿರುವ ಸುಪ್ರೀಂ ಕೋರ್ಟ್, ಮೀಸಲಿಟ್ಟಿದ್ದ 35 ಸಾವಿರ ಕೋಟಿ ರೂಪಾಯಿಗಳನ್ನು ಇದುವರೆಗೆ ಹೇಗೆ ಖರ್ಚು ಮಾಡಲಾಗಿದೆ ಎಂಬ ಕುರಿತು ಎಲ್ಲಾ ಸಂಬಂಧಪಟ್ಟ ಇತ್ತೀಚಿನ ದಾಖಲೆಗಳನ್ನು ಒದಗಿಸುವಂತೆ ಕೇಳಿದೆ. ಅಲ್ಲದೆ ಇದುವರೆಗೆ ಕೊವಾಕ್ಸಿನ್, ಕೋವಿಶೀಲ್ಡ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಗಳ ಖರೀದಿ ಬಗ್ಗೆ ಕೂಡ ಲೆಕ್ಕಪತ್ರ, ವಿವರಣೆ ಕೇಳಿದೆ. 

ಉದಾರೀಕೃತ ಲಸಿಕೆ ನೀತಿ, ಕೇಂದ್ರ, ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಲಸಿಕೆಗಳ ವಿವಿಧ ಬೆಲೆ, ಕೋವಿನ್ ಆ್ಯಪ್‌ನಲ್ಲಿ ಕಡ್ಡಾಯವಾಗಿ ನೋಂದಾಯಿಸುವ ಕುರಿತು ಕೇಂದ್ರದ ನಿರ್ಧಾರಗಳನ್ನು ನಿನ್ನೆ ತನ್ನ ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ ಸುಪ್ರೀಂ ಕೋರ್ಟ್‌, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಇಂಟರ್ನೆಟ್ ಲಭ್ಯತೆ ವಿಷಯದಲ್ಲಿ ಲಸಿಕೆಗಳನ್ನು ನೋಂದಣಿ ಮಾಡುವ ಕುರಿತು ಸರ್ಕಾರದ ಪ್ರತಿಕ್ರಿಯೆ ಕೇಳಿದೆ.

ಆರಂಭದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ನೀಡಿದ ಸರ್ಕಾರ ನಂತರ 18ರಿಂದ 44 ವರ್ಷದ ವಯೋಮಾನದವರಿಗೆ ಏಕೆ ಹಣ ಸಂಗ್ರಹಿಸುತ್ತಿದೆ, ಖಾಸಗಿ ಆಸ್ಪತ್ರೆಗಳಿಗೆ ಯಾವ ರೀತಿ ಲಸಿಕೆ ನೀಡುತ್ತಿದೆ ಎಂದು ಕೂಡ ವಿವರಣೆ ನೀಡುವಂತೆ ನ್ಯಾಯಾಲಯ ಕೇಳಿದೆ.

ಲಸಿಕೆ ಅಭಿಯಾನದ ಮೊದಲ ಮೂರು ಹಂತಗಳಲ್ಲಿ ಅರ್ಹ ವ್ಯಕ್ತಿಗಳ ವಿರುದ್ಧವಾಗಿ, ಒಂದು ಅಥವಾ ಎರಡೂ ಪ್ರಮಾಣದಲ್ಲಿ ಲಸಿಕೆ ಹಾಕಿದ ಜನಸಂಖ್ಯೆಯ ಶೇಕಡಾವಾರು ಅಂಕಿಅಂಶ ಒದಗಿಸುವಂತೆ ನ್ಯಾಯಾಲಯವು ಕೇಂದ್ರವನ್ನು ಕೇಳಿದೆ. ಅಂಕಿಅಂಶದಲ್ಲಿ ಇಲ್ಲಿಯವರೆಗೆ ಲಸಿಕೆ ಹಾಕಿದ ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಒಳಗೊಂಡಿರಬೇಕು ಎಂದು ತಾಕೀತು ಮಾಡಿದೆ.

ಈ ಡಿಸೆಂಬರ್ ಅಂತ್ಯದ ವೇಳೆಗೆ ಉದ್ದೇಶಿತ ವಯಸ್ಸಿನ ಪ್ರತಿಯೊಬ್ಬರಿಗೂ ಲಸಿಕೆ ಹಾಕುವ ವಿಶ್ವಾಸದಲ್ಲಿ ಕೇಂದ್ರ ಸರ್ಕಾರವಿದೆ. ಅಂತಹ ಹೆಚ್ಚಿನ ಪ್ರಮಾಣದ ಉತ್ಪಾದನೆಯನ್ನು ಹೇಗೆ ಸಾಧಿಸಬಹುದು ಎಂಬುದರ ಕುರಿತು ನ್ಯಾಯಾಲಯವು ಸಂಪೂರ್ಣ ವಿವರಗಳನ್ನು ನಿನ್ನೆ ಕೇಳಿದೆ. ಉಳಿದ ಜನಸಂಖ್ಯೆಗೆ ಲಸಿಕೆ ಹಾಕಲು ಕೇಂದ್ರವು ಹೇಗೆ ಮತ್ತು ಯಾವಾಗ ಯೋಜನೆ ಹಾಕಿಕೊಂಡಿದೆ ಎಂಬುದರ ಬಗ್ಗೆ ಒಂದು ರೂಪರೇಖೆಯನ್ನು ಸಹ ಅದು ಕೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com