ಕೋಲ್ಕತಾ: ಚುನಾವಣೆ ಫಲಿತಾಂಶದ ನಂತರ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರ ಕುರಿತಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(ಎನ್‌ಎಚ್‌ಆರ್‌ಸಿ)ದ ತನಿಖೆಗೆ ನಿರ್ದೇಶನ ನೀಡಿದ ಆದೇಶವನ್ನು ಹಿಂಪಡೆಯುವಂತೆ ಅಥವಾ ತಡೆಹಿಡಿಯುವಂತೆ ಕೋರಿ ಪಶ್ಚಿಮ ಬಂಗಾಳ ಸರ್ಕಾರದ ಸಲ್ಲಿಸಿದ್ದ ಮನವಿಯನ್ನು ಕೋಲ್ಕತ್ತಾ ಹೈಕೋರ್ಟ್ ತಿರಸ್ಕರಿಸಿದೆ.
ಫಲಿತಾಂಶದ ನಂತರದ ಹಿಂಸಾಚಾರದ ಸಂದರ್ಭಗಳಲ್ಲಿ ವಾಸಸ್ಥಳಗಳಿಂದ ಸ್ಥಳಾಂತರ, ದೈಹಿಕ ಹಲ್ಲೆ, ಆಸ್ತಿಪಾಸ್ತಿ ನಾಶ ಮತ್ತು ವ್ಯಾಪಾರ ಸ್ಥಳಗಳನ್ನು ದರೋಡೆ ಮಾಡಲಾಗಿದೆ ಎಂದು ಆರೋಪಿಸಿ ಸಂತ್ರಸ್ತರು ಸಲ್ಲಿಸಿದ್ದ ಪಿಐಎಲ್ ಸಂಬಂಧ ಹೈಕೋರ್ಟ್ ಜೂನ್ 18ರಂದು ಎಲ್ಲಾ ಪ್ರಕರಣಗಳ ಕುರಿತಂತೆ ಪರಿಶೀಲನೆ ನಡೆಸುವಂತೆ ಎನ್‌ಎಚ್‌ಆರ್‌ಸಿಗೆ ಆದೇಶಿಸಿತ್ತು.
ಪಶ್ಚಿಮ ಬಂಗಾಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಲ್ಲಿಸಿದ ವರದಿಯನ್ನು ಗಮನದಲ್ಲಿಟ್ಟುಕೊಂಡು ಜೂನ್ 18 ರಂದು ನ್ಯಾಯಪೀಠ ಈ ಆದೇಶವನ್ನು ಅಂಗೀಕರಿಸಿದ್ದು, ಜೂನ್ 10 ರ ಮಧ್ಯಾಹ್ನದವರೆಗೆ 3,243 ಜನರು ಬಾಧಿತರಾಗಿದ್ದಾರೆ ಎಂದು ವರದಿಯಾಗಿದೆ.
ಡಬ್ಲ್ಯೂಬಿಎಸ್ಎಲ್ಎಸ್ಎ ಸದಸ್ಯ ಕಾರ್ಯದರ್ಶಿ ಹಲವಾರು ಪ್ರಕರಣಗಳಲ್ಲಿ ದೂರುಗಳನ್ನು ಪೊಲೀಸ್ ಅಧೀಕ್ಷಕರಿಗೆ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಕಳುಹಿಸಲಾಗಿದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂಬುದನ್ನು ಉಲ್ಲೇಖಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿಗಳಾದ ಐಪಿ ಮುಖರ್ಜಿ, ಹರೀಶ್ ಟಂಡನ್, ಸೌಮೆನ್ ಸೇನ್ ಮತ್ತು ಸುಬ್ರತಾ ತಾಲೂಕ್ದಾರ್ ಅವರನ್ನೊಳಗೊಂಡ ಐದು ನ್ಯಾಯಾಧೀಶರ ಪೀಠವು ಈ ಆದೇಶವನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ಎನ್‌ಎಚ್‌ಆರ್‌ಸಿ ಅಧ್ಯಕ್ಷರಿಗೆ ನಿರ್ದೇಶನ ನೀಡಿತ್ತು.
Advertisement