ಕೋವಿಡ್ ನಿರ್ವಹಣೆ: 'ತಾಂತ್ರಿಕ ತೊಂದರೆ' ಕಾರಣ ಪ್ರಕರಣದ ವಿಚಾರಣೆ ಮೇ 13ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್
ನವದೆಹಲಿ: ವರ್ಚುವಲ್ ವಿಚಾರಣೆ ವೇಳೆ ತಾಂತ್ರಿಕ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೋವಿಡ್ ನಿರ್ವಹಣೆ ಕುರಿತ ಸ್ವಯಂ ಪ್ರೇರಿತ ಅರ್ಜಿಯ ವಿಚಾರಣೆಯನ್ನು ಮೇ 13ಕ್ಕೆ ಮುಂದೂಡಿರುವುದಾಗಿ ಮತ್ತು ಕೇಂದ್ರ ಸರ್ಕಾರ ಸಲ್ಲಿಸಿದ್ದ ಅಫಿಡವಿಟ್ ಪರಿಶೀಲಿಸಲು ಹೆಚ್ಚಿನ ಸಮಯ ನೀಡಿರುವುದಾಗಿ ಸೋಮವಾರ ಸುಪ್ರೀಂ ಕೋರ್ಟ್ ತಿಳಿಸಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಎಲ್ ಎನ್ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರ ನ್ಯಾಯಪೀಠವು "ನಮ್ಮ ಸರ್ವರ್ ಇಂದು ಡೌನ್ ಆಗಿದೆ. ನಾವು ನ್ಯಾಯಾಧೀಶರು ನಮ್ಮ ನಡುವೆ ಚರ್ಚೆ ನಡೆಸಿ ಗುರುವಾರ ವಿಚಾರಣೆ ನಡೆಸಲು ನಿರ್ಧರಿಸಿದ್ದೇವೆ" ಎಂದು ಹೇಳಿದ್ದಾರೆ.
ಈ ಮಧ್ಯೆ ನ್ಯಾಯಾಧೀಶರು ಕಳೆದ ತಡರಾತ್ರಿ ಸಲ್ಲಿಸಿದ ಕೇಂದ್ರದ ಅಫಿಡವಿಟ್ ಅನ್ನು ಪರಿಶೀಲಿಸಲು ಮತ್ತು ಈ ವಿಷಯದಲ್ಲಿ ಅಮಿಕಸ್ ಕ್ಯೂರಿಯ ಪ್ರತಿಕ್ರಿಯೆ ಪಡೆಯಲು ಹೆಚ್ಚಿನ ಸಮಯ ಸಿಗಲಿದೆ ಎಂದು ನ್ಯಾಯಮೂರ್ತಿ ಭಟ್ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತಿದ್ದ ವಿಚಾರಣೆಯನ್ನು ತಾಂತ್ರಿಕ ತೊಂದರೆಗಳು ಸ್ಥಗಿತಗೊಳಿಸುವ ಮೊದಲು, ನ್ಯಾಯಮೂರ್ತಿ ಚಂದ್ರಚೂಡ್ ಅವರು ಸುದ್ದಿ ವರದಿಯನ್ನು ಉಲ್ಲೇಖಿಸಿ, ನ್ಯಾಯಪೀಠದ ಇಬ್ಬರು ನ್ಯಾಯಾಧೀಶರು ಸೋಮವಾರ ಬೆಳಗ್ಗೆ ಕೇಂದ್ರದ ಅಫಿಡವಿಟ್ ಪಡೆದರು ಎಂದು ತಿಳಿಸಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಅಫಿಡವಿಟ್ ಸಲ್ಲಿಸಿದ ನಂತರ ಅದನ್ನು ರಾಜ್ಯಗಳಿಗೆ ಕಳುಹಿಸಲಾಗಿತ್ತು. ಇದು ಮಾಧ್ಯಮಗಳಿಗೆ ಹೇಗೆ ಸಿಕ್ಕಿತು ಎಂದು ತಿಳಿದುಕೊಳ್ಳುವುದು ತುಂಬಾ ಕಷ್ಟ ಎಂದು ಹೇಳಿದರು.
ಏಪ್ರಿಲ್ 30 ರಂದು, ಉನ್ನತ ನ್ಯಾಯಾಲಯವು ರಾಜ್ಯಗಳ ಸಹಯೋಗದೊಂದಿಗೆ ತುರ್ತು ಉದ್ದೇಶಗಳಿಗಾಗಿ ಆಮ್ಲಜನಕದ ಬಫರ್ ಸ್ಟಾಕ್ ಅನ್ನು ಸಿದ್ಧಪಡಿಸುವಂತೆ ಮತ್ತು ಹಂಚಿಕೆ ಸ್ಥಳ ವಿಕೇಂದ್ರೀಕರಿಸುವಂತೆ ಕೇಂದ್ರಕ್ಕೆ ನಿರ್ದೇಶಿಸಿತ್ತು, ಇದರಿಂದಾಗಿ ಆಕ್ಸಿಜನ್ ಸಾಮಾನ್ಯ ಪೂರೈಕೆ ಸರಪಳಿ ಅಸ್ತವ್ಯಸ್ತಗೊಂಡರೆ ಅದು ತಕ್ಷಣ ಲಭ್ಯವಾಗುತ್ತದೆ ಎಂದು ಹೇಳಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ