
ಚೆನ್ನೈ: ರೆಮ್ಡೆಸಿವಿರ್ ಮತ್ತು ಆಕ್ಸಿಜನ್ ಸಿಲಿಂಡರ್ ಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗುತ್ತಿದೆ ಎಂಬ ವ್ಯಕ್ತಿಗಳ ವರದಿಗಳ ಮಧ್ಯೆ, ರೆಮ್ಡೆಸಿವಿರ್, ಆಕ್ಸಿಜನ್ ಸಿಲಿಂಡರ್‌ಗಳನ್ನು ಸಂಗ್ರಹಿಸಿಟ್ಟುಕೊಂಡವರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶನಿವಾರ ಪೊಲೀಸ್ ಇಲಾಖೆಗೆ ಆದೇಶಿಸಿದ್ದಾರೆ.
ಈ ಸಂಬಂಧ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿರುವ ಸಿಎಂ ಸ್ಟಾಲಿನ್ ಅವರು, ಕೊರೋನಾ ವೈರಸ್ ಸೋಂಕಿನಿಂದ ಜನರ ಪ್ರಾಣ ರಕ್ಷಿಸುವುದು ರಾಜ್ಯ ಸರ್ಕಾರದ ಮೊದಲ ಜವಾಬ್ದಾರಿಯಾಗಿದ್ದು, ರೆಮ್ಡೆಸಿವಿರ್, ಆಕ್ಸಿಜನ್ ಸಿಲಿಂಡರ್ ಸಂಗ್ರಹಿಸಿ ಅದನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರ ವಿರುದ್ಧ ಗೂಂಡಾ ಕಾಯ್ದೆ ಅಡಿ ಕೇಸ್ ದಾಖಲಿಸುವಂತೆ ಸೂಚಿಸಿದ್ದಾರೆ.
ಸರ್ಕಾರದ ಉದ್ದೇಶಕ್ಕೆ ವಿರುದ್ಧವಾಗಿ ವರ್ತಿಸುವವರ ಚಟುವಟಿಕೆಗಳನ್ನು ನಿಯಂತ್ರಿಸುವ ಅವಶ್ಯಕತೆ ಇದೆ ಎಂದಿರುವ ಸಿಎಂ, ದೇಶಾದ್ಯಂತ ಬಿಕ್ಕಟ್ಟನ್ನು ಸೃಷ್ಟಿಸಿರುವ ಕೋವಿಡ್‌ನ ಎರಡನೇ ಅಲೆಯ ಪ್ರಭಾವದಿಂದ ತಮಿಳುನಾಡು ಹೊರತಾಗಿಲ್ಲ ಎಂದು ಹೇಳಿದ್ದಾರೆ.
ಇಂತಹ ಸಮಯದಲ್ಲಿ, ಕೆಲವು ಸಾಮಾಜ ವಿರೋಧಿ ಶಕ್ತಿಗಳು ರೆಮ್‌ಡೆಸಿವಿರ್ ಔಷಧಿ ಸಂಗ್ರಹಿಸಿ ಅದನ್ನು ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿವೆ. ಅಂತೆಯೇ, ಆಮ್ಲಜನಕ ಸಿಲಿಂಡರ್‌ಗಳನ್ನು ಅತಿಯಾದ ಬೆಲೆಗೆ ಮಾರಾಟ ಮಾಡುವ ಬಗ್ಗೆ ದೂರುಗಳಿವೆ. ರಾಜ್ಯವು ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿರುವಾಗ ಇವು ಗಂಭೀರ ಸ್ವಭಾವದ ಅಪರಾಧಗಳಾಗಿದ್ದು, ರೆಮ್ಡಿಸಿವಿರ್ ಇಂಜೆಕ್ಷನ್ ಮತ್ತು ಆಕ್ಸಿಜನ್ ಸಿಲಿಂಡರ್‌ಗಳನ್ನು ಸಂಗ್ರಹಿಸುವವರನ್ನು ಗೂಂಡಾ ಕಾಯ್ದೆಯಡಿ ಕೇಸ್ ದಾಖಲಿಸಲು ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಿದ್ದೇನೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
Advertisement