ಬಂಧಿತ ವೈಎಸ್‌ಆರ್ ಕಾಂಗ್ರೆಸ್ ಬಂಡಾಯ ಸಂಸದ ಕೆ. ರಘುರಾಮ ಕೃಷ್ಣಂ ರಾಜು ವೈದ್ಯಕೀಯ ಪರೀಕ್ಷೆಗೆ 'ಸುಪ್ರೀಂ' ಅಸ್ತು
ವಿಜಯವಾಡ: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಆಂಧ್ರ ಪ್ರದೇಶದ ಅಪರಾಧ ತನಿಖಾ ಇಲಾಖೆ(ಸಿಐಡಿ)ಯಿಂದ ಬಂಧನಕ್ಕೊಳಗಾಗಿರುವ ವೈಎಸ್ಆರ್ ಕಾಂಗ್ರೆಸ್ ಬಂಡಾಯ ಸಂಸದ ಕೆ ರಘುರಾಮ ಕೃಷ್ಣಂ ರಾಜು ಅವರ ವೈದ್ಯಕೀಯ ಪರೀಕ್ಷೆಗೆ ಸುಪ್ರೀಂ ಕೋರ್ಟ್ ಸೋಮವಾರ ಅನುಮತಿ ನೀಡಿದೆ.
ಜಾಮೀನು ನಿರಾಕರಿಸಿದ ಆಂಧ್ರ ಪ್ರದೇಶದ ಹೈಕೋರ್ಟ್ ಆದೇಶದ ವಿರುದ್ಧ ಸಂಸದರು ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿನೀತ್ ಸರನ್ ಮತ್ತು ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರನ್ನೊಳಗೊಂಡ ಸುಪ್ರೀಂ ಪೀಠ, ಕೆ ರಘುರಾಮ ಕೃಷ್ಣಂ ರಾಜು ಅವರಿಗೆ ನೆರೆಯ ತೆಲಂಗಾಣದ ಸಿಕಂದರಾಬಾದ್ ಸೇನಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲು ಅನುಮತಿ ನೀಡಿದೆ.
ಅರ್ಜಿದಾರರನ್ನು ನ್ಯಾಯಾಂಗ ಬಂಧನದಲ್ಲಿಯೇ ಸಿಕಂದರಾಬಾದ್‌ನ ಸೇನಾ ಆಸ್ಪತ್ರೆಗೆ ಪರೀಕ್ಷೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ನ್ಯಾಯಪೀಠ ಹೇಳಿದೆ.
ಪರೀಕ್ಷೆಯ ಸಮಯದಲ್ಲಿ ಅರ್ಜಿದಾರರೊಂದಿಗೆ ಇರಬೇಕಾದ ನ್ಯಾಯಾಂಗ ಅಧಿಕಾರಿಯನ್ನು ತೆಲಂಗಾಣ ಹೈಕೋರ್ಟ್ ನಾಮನಿರ್ದೇಶನ ಮಾಡುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.
ರಘು ರಾಮ ಕೃಷ್ಣಂ ರಾಜು ಅವರು ಈ ಹಿಂದೆ ಪೊಲೀಸರು ತಮಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಆಂಧ್ರ ಪ್ರದೇಶ ಹೈಕೋರ್ಟ್‌ಗೆ ತಿಳಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ