ಕೋವಿಡ್ ನಡುವೆ 22 ಹೊಸ ಏಮ್ಸ್ ಆಸ್ಪತ್ರೆಗಳಿಗೆ ಅನುಮೋದನೆ; 6 ಆಸ್ಪತ್ರೆಗಳಲ್ಲಿ ಪೂರ್ಣ ಪ್ರಮಾಣದ ಕಾರ್ಯಾರಂಭ 

ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಕೇಂದ್ರ ಸರ್ಕಾರ ಕೋವಿಡ್-19 ನಡುವೆ ದೇಶಾದ್ಯಂತ ಹೊಸದಾಗಿ 22 ಏಮ್ಸ್ ಆಸ್ಪತ್ರೆಗಳ ಸ್ಥಾಪನೆಗೆ ಅನುಮೋದನೆ ನೀಡಿದೆ.
ಏಮ್ಸ್ (ಸಂಗ್ರಹ ಚಿತ್ರ)
ಏಮ್ಸ್ (ಸಂಗ್ರಹ ಚಿತ್ರ)

ನವದೆಹಲಿ: ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಕೇಂದ್ರ ಸರ್ಕಾರ ಕೋವಿಡ್-19 ನಡುವೆ ದೇಶಾದ್ಯಂತ ಹೊಸದಾಗಿ 22 ಏಮ್ಸ್ ಆಸ್ಪತ್ರೆಗಳ ಸ್ಥಾಪನೆಗೆ ಅನುಮೋದನೆ ನೀಡಿದ್ದು ಈ ಪೈಕಿ ಈಗಾಗಲೇ 6 ಹೊಸ ಆಸ್ಪತ್ರೆಗಳು ಪೂರ್ಣ ಪ್ರಮಾಣದ ಕಾರ್ಯಾಚರಣೆ ಪ್ರಾರಂಭವಾಗಿದ್ದು, 7 ಹೊಸ ಆಸ್ಪತ್ರೆಗಳು ಭಾಗಶಃ ಕಾರ್ಯಾಚರಣೆ ನಡೆಸುತ್ತಿವೆ. 

ಈ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದ್ದು, 22 ಹೊಸ ಏಮ್ಸ್ ಆಸ್ಪತ್ರೆಗಳ ಪೈಕಿ ಭೋಪಾಲ್, ಭುವನೇಶ್ವರ್, ಜೋಧ್ ಪುರ, ಪಾಟ್ನಾ, ರಾಯ್ ಪುರ, ಹೃಷಿಕೇಶಗಳಲ್ಲಿ ಒಟ್ಟು 6 ಆಸ್ಪತ್ರೆಗಳು ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, ಕೋವಿಡ್-19 ಸಂಬಂಧಿತ ಚಿಕಿತ್ಸೆಗಳನ್ನು ಐಸಿಯು, ಆಕ್ಸಿಜನ್ ಸಹಿತವಾಗಿ ಒದಗಿಸುತ್ತಿವೆ. 

ಇನ್ನು ಉಳಿದ 7 ಹೊಸ ಏಮ್ಸ್ ಆಸ್ಪತ್ರೆಗಳಲ್ಲಿ ಒಪಿಡಿ ಸೌಲಭ್ಯ, ಎಂಬಿಬಿಎಸ್ ತರಗತಿಗಳು ಪ್ರಾರಂಭವಾಗಿವೆ. ಇನ್ನು 5 ಇನ್ಸ್ಟಿಟ್ಯೂಟ್ ಗಳಲ್ಲಿ ಕೇವಲ ಎಂಬಿಬಿಎಸ್ ತರಗತಿಗಳು ಮಾತ್ರ ನಡೆಯುತ್ತಿವೆ ಎಂದು ಸಚಿವಾಲಯ ಮಾಹಿತಿ ನೀಡಿದೆ. 

ಎಲ್ಲಾ ಹೊಸ ಏಮ್ಸ್ ಆಸ್ಪತ್ರೆಗಳೂ ಕೋವಿಡ್-19 ನ ಎರಡನೇ ಅಲೆಗೆ ಪರಿಣಾಮಕಾರಿಯಾಗಿ ಸ್ಪಂದಿಸುತ್ತಿದ್ದು, ಪ್ರಾರಂಭಿಕ ಹಂತದ ಕೋವಿಡ್-19 ಲಕ್ಷಣಗಳಿರುವವರಿಂದ ಹಿಡಿದು ಉಲ್ಬಣಗೊಂಡವರವರೆಗೂ ಚಿಕಿತ್ಸೆ ನೀಡುವ ಬೆಡ್, ಆಕ್ಸಿಜನ್, ವೆಂಟಿಲೇಟರ್ ಗಳ ಸೌಲಭ್ಯಗಳನ್ನು ಹೊಂದಿವೆ. 

ಏಪ್ರಿಲ್ ನ ಎರಡನೇ ವಾರದಿಂದ ಪ್ರಾರಂಭವಾಗಿ, ಎಲ್ಲಾ ಹೊಸ ಸಂಸ್ಥೆಗಳಲ್ಲೂ 1,300 ಆಕ್ಸಿಜನ್ ಬೆಡ್ ಗಳು, 530 ಐಸಿಯು ಬೆಡ್ ಗಳನ್ನು ಕೋವಿಡ್-19 ಚಿಕಿತ್ಸೆಗಾಗಿ ಹೆಚ್ಚಿಸಿ ಮೀಸಲಿಡಲಾಗಿದೆ. ಈಗ 1,900 ಆಕ್ಸಿಜನ್ ಹಾಗೂ 900 ಐಸಿಯು ಬೆಡ್ ಗಳು ಜನತೆ ಲಭ್ಯವಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. 

ರಾಯ್ ಬರೇಲಿ ಹಾಗೂ ಗೋರಖ್ ಪುರದಲ್ಲಿ ಏಪ್ರಿಲ್-ಮೇ, 2021 ರಲ್ಲಿ ಪ್ರಾರಂಭವಾದ ಏಮ್ಸ್ ಗಳಿಂದ ಉತ್ತರ ಪ್ರದೇಶದ ದೂರದ ಜಿಲ್ಲೆಗಳಾದ ಫತೇಹ್ ಪುರ, ಬಾರಾಬಂಕಿ, ಕೌಶಂಬಿ, ಪ್ರತಾಪ್ ಗಢ, ಸುಲ್ತಾನ್ ಪುರ, ಅಂಬೇಡ್ಕರ್ ನಗರ, ಬಸ್ತಿ, ಸಂತ್ ಕಬೀರ್ ನಗರ, ಮಹಾರಾಜ್ ಗಂಜ್, ಕುಶೀನಗರ್, ಡಿಯೋರಿಯಾ, ಬಲ್ಲಿಯಾ, ಮೌ ಹಾಗೂ ಆಜಂಗಢಗಳಲ್ಲಿರುವ ರೋಗಿಗಳಿಗೆ ಅತ್ಯುತ್ತಮ ಸೌಲಭ್ಯ ದೊರೆಯುವಂತಾಗಿದೆ. 

ಪ್ರಸ್ತುತ 12 ಹೊಸ ಏಮ್ಸ್ ಗಳಲ್ಲಿ 1,925 ಐಸಿಯುಯೇತರ ಆಕ್ಸಿಜನ್ ಬೆಡ್ ಗಳು, 908 ಐಸಿಯು ಬೆಡ್ ಗಳು ವೆಂಟಿಲೇಟರ್ ಗಳ ಸಹಿತ ಲಭ್ಯವಿದೆ.ಹೊಸ ಏಮ್ಸ್ ಗಳಲ್ಲಿ ಕೋವಿಡ್-19 ಪ್ರಕರಣಗಳನ್ನು ನಿಭಾಯಿಸುವುದಕ್ಕಾಗಿ ಕೇಂದ್ರ ಸರ್ಕಾರ ಅಗತ್ಯ ಉಪಕರಣಗಳು, ಔಷಧ ಸೌಲಭ್ಯಗಳ ವ್ಯವಸ್ಥೆ ಮಾಡುತ್ತಿದೆ. 

ಹೊಸದಾಗಿ ಪ್ರಾರಂಭವಾಗಿರುವ ಪ್ರಾದೇಶಿಕ ಏಮ್ಸ್ ಗಳು ಡಯಾಲಿಸಿಸ್, ಹೃದಯ ಸಂಬಂಧಿ ಸಮಸ್ಯೆಗಳು, ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಮುಂತಾದ ಕೋವಿಡ್ ಯೇತರ ತುರ್ತು ಚಿಕಿತ್ಸೆಗಳಿಗೂ ಸ್ಪಂದಿಸುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ರಾಯ್ ಪುರ ಎಮ್ಸ್ ಒಂದರಲ್ಲಿ ಈ ವರೆಗೂ ಮಾ.2021 ರಿಂದ ಮೇ 17, 2021 ವರೆಗೆ 9664 ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, ಕೋವಿಡ್-19 ಸೋಂಕಿಗೆ ಒಳಗಾಗಿದ್ದ 362 ಮಹಿಳೆಯರಿಗೆ ಚಿಕಿತ್ಸೆ ನೀಡಿದೆ, ಈ ಪೈಕಿ 223 ಮಂದಿ ಗರ್ಭಿಣಿಯರಿಗೆ ಯಶಸ್ವಿ ಹೆರಿಗೆಯನ್ನೂ ಮಾಡಿಸಲಾಗಿದೆ 402 ಕೋವಿಡ್-19 ಸೋಂಕಿತ ಮಕ್ಕಳಿಗೆ  ಶಿಶು ವೈದ್ಯಕ್ಕೆ ಸಂಬಂಧಿಸಿದ ಚಿಕಿತ್ಸೆಯನ್ನೂ ನೀಡಲಾಗಿದೆ. ಕೋವಿಡ್-19 ಸೋಂಕಿತ 898 ಮಂದಿ ಹೃದಯ ಸಮಸ್ಯೆಗೆ ಹೊಸ ಏಮ್ಸ್ ನಲ್ಲಿ ಚಿಕಿತ್ಸೆ ಪಡೆದಿದ್ದು, 272 ಮಂದಿ ಡಯಾಲಿಸಿಸ್ ಮಾಡಿಸಿಕೊಂಡಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. 

ಇನ್ನು ಹೊಸದಾಗಿ ಕಾರ್ಯಾಚರಣೆ ಪ್ರಾರಂಭಿಸಿರುವ ಏಮ್ಸ್ ಗಳಲ್ಲಿ, ಕೋವಿಡ್-19 ನಿಂದ ಚೇತರಿಸಿಕೊಂಡ ಬಳಿಕ ಕಾಣಿಸಿಕೊಳ್ಳುತ್ತಿರುವ ಮ್ಯೂಕೋರ್ಮೈಕೋಸಿಸ್ ಸೋಂಕಿಗೂ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com