ಕೋವಿಡ್-19 ವೈರಸ್ ಹೊತ್ತ ಹನಿಗಳು ಗಾಳಿಯಲ್ಲಿ 10 ಮೀಟರ್ ವರೆಗೂ ಚಲಿಸಬಹುದು: ಪ್ರಧಾನ ವೈಜ್ಞಾನಿಕ ಸಲಹೆಗಾರ

ಕೊರೋನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹೇಗೆ ಹರಡುತ್ತದೆ ಎಂಬ ಬಗ್ಗೆ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆ ಕಚೇರಿ ಮಾರ್ಗಸೂಚಿ ಹೊರಡಿಸಿದೆ.
ಪ್ರಧಾನ ವೈಜ್ಞಾನಿಕ ಕಚೇರಿ ಬಿಡುಗಡೆ ಮಾಡಿರುವ ಸೂಚನೆ
ಪ್ರಧಾನ ವೈಜ್ಞಾನಿಕ ಕಚೇರಿ ಬಿಡುಗಡೆ ಮಾಡಿರುವ ಸೂಚನೆ

ನವದೆಹಲಿ: ಕೊರೋನಾ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹೇಗೆ ಹರಡುತ್ತದೆ ಎಂಬ ಬಗ್ಗೆ ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆ ಕಚೇರಿ ಮಾರ್ಗಸೂಚಿ ಹೊರಡಿಸಿದೆ.

ಹಾಗಾದರೆ ಒಬ್ಬರಿಂದ ಇನ್ನೊಬ್ಬರಿಗೆ ಕೊರೋನಾ ಸೋಂಕು ಹೇಗೆ ಹರಡುತ್ತದೆ?
-ಸೋಂಕು ಲಕ್ಷಣ ರಹಿತ ಕೋವಿಡ್ ಪಾಸಿಟಿವ್ ರೋಗಿಗಳಿಂದ ಸಾಕಷ್ಟು ವೈರಾಣು ಸುತ್ತಮುತ್ತಲಿನ ಹಲವರಿಗೆ ಹರಡುವ ಸಾಧ್ಯತೆಯಿದೆ. ಸೋಂಕು ಹೊಂದಿರುವ ವ್ಯಕ್ತಿಯ ಬಾಯಿ ಮತ್ತು ಮೂಗಿನ ಹೊಳ್ಳೆಗಳಿಂದ ಹನಿಗಳು ಮತ್ತು ಕಣಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ವೈರಸ್ ಹೊರಾಂಗಣ ಪ್ರದೇಶಗಳಲ್ಲಿ ಅಂದರೆ ಹೊರ ಪ್ರದೇಶಗಳಲ್ಲಿ ಹರಡುವುದು ಕಡಿಮೆ, ಒಳಾಂಗಣ ಪ್ರದೇಶಗಳಲ್ಲಿ ಹೆಚ್ಚು ಹರಡುತ್ತದೆ ಎಂದು ವೈಜ್ಞಾನಿಕ ಸಲಹಾ ಕಚೇರಿ ಹೇಳಿದೆ.

-ಸೋಂಕಿತ ವ್ಯಕ್ತಿಯ ಬಾಯಿಯಿಂದ ಕೆಳಗೆ ಬಿದ್ದ ವೈರಾಣು ಹನಿಗಳು 10 ಮೀಟರ್ ವರೆಗೆ ಹರಡಿ ಮತ್ತೊಬ್ಬ ವ್ಯಕ್ತಿಗೆ ಸೋಂಕು ಹತ್ತಿಸಬಹುದು. ವೈರಸ್ ದೇಹಕ್ಕೆ ಹೊಕ್ಕು ಅದು ಲಕ್ಷಣ ಗೋಚರವಾಗಲು 2 ವಾರಗಳವರೆಗೆ ಸಮಯ ತೆಗೆದುಕೊಳ್ಳಬಹುದು. ಈ ಎರಡು ವಾರಗಳಲ್ಲಿ ಸಾಕಷ್ಟು ಮಂದಿಗೆ ಇವರಿಂದ ಸೋಂಕು ಹರಡಬಹುದು. ಯಾವುದೇ ಸೋಂಕಿನ ಲಕ್ಷಣ ಹೊಂದಿಲ್ಲದವರಿಂದ ಕೂಡ ಸೋಂಕು ಹರಡುತ್ತದೆ ಎಂದು ವರದಿಯಲ್ಲಿ ಹೇಳಿದೆ.

-ಹೀಗಾಗಿ ಯಾವುದೇ ಸೋಂಕಿನ ಲಕ್ಷಣ ಹೊಂದಿಲ್ಲದಿರುವ ವ್ಯಕ್ತಿಗಳ ಪಕ್ಕ ನಿಂತಾಗಲೂ ಸುರಕ್ಷತೆಗೆ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಿ, ಒಬ್ಬರಿಂದ ಮತ್ತೊಬ್ಬರಿಗೆ ಹತ್ತಿರ ನಿಂತು ಮಾತನಾಡುವುದು, ಹಾಡುವುದು, ನಗುವುದು, ಕೆಮ್ಮುವುದು, ಸೀನುವ ಮೂಲಕ ಹರಡಬಹುದು. ಹೀಗಾಗಿ ಅತ್ಯಂತ ಜಾಗ್ರತವಾಗಬೇಕಾಗಿದ್ದು ಸರಿಯಾದ ಎಚ್ಚರಿಕೆ ಕ್ರಮಗಳನ್ನು ಅನುಸರಿಸುವ ಮೂಲಕ ಸೋಂಕು ಹರಡುವುದನ್ನು ತಡೆಯಬಹುದು ಎಂದು ಪ್ರಧಾನ ವೈಜ್ಞಾನಿಕ ಸಲಹೆಗಾರ ಕಚೇರಿ ತಿಳಿಸಿದೆ.

-ಕಿಟಕಿಗಳು ಮತ್ತು ಬಾಗಿಲುಗಳನ್ನು ತೆಗೆದಿಟ್ಟರೆ ಉತ್ತಮ ಗಾಳಿ ಹೊರಗಡೆಯಿಂದ ಬರುತ್ತದೆ ಎಂದು ನಂಬಿಕೊಂಡಿದ್ದರೂ ಅದಕ್ಕಿಂತ ಹೆಚ್ಚು ಕಿಟಕಿ ಸಮೀಪ ಎಕ್ಸಾಸ್ಟ್  ಫ್ಯಾನ್ ಇಡುವುದು ಉತ್ತಮ ಎನ್ನುತ್ತದೆ ಸರ್ಕಾರದ ಮಾರ್ಗಸೂಚಿ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದರ ಜೊತೆಗೆ ಉತ್ತಮ ಗಾಳಿ, ಬೆಳಕು ಕೂಡ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಮುಖ್ಯವಾಗುತ್ತದೆ.

-ಇತ್ತೀಚೆಗೆ ಸರ್ಕಾರದ ಸಲಹೆಗಾರ ಡಾ ಕೆ ವಿಜಯ್ ರಾಘವನ್ ಟ್ವೀಟ್ ಮಾಡಿ ನೀವು ಲಸಿಕೆ ಹಾಕಿಸಿಕೊಂಡಿದ್ದೀರೋ, ಇಲ್ಲವೋ ಮೂರು ಅಂಶಗಳನ್ನು ಮಾತ್ರ ಮರೆಯಬೇಡಿ, ಮಾಸ್ಕ್ ಧರಿಸುವುದು, ಶಾರೀರಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಉತ್ತಮ ಗಾಳಿ ಬೆಳಕು ಸಿಗುವಂತೆ ನೋಡಿಕೊಳ್ಳುವುದು ಎಂದಿದ್ದರು.

-"ಗಾಳಿ ಹೇಗೆ ವಾಸನೆ ಹರಡುವುದನ್ನು ತಡೆಯುತ್ತದೆಯೋ ಹೊರಾಂಗಣ ಗಾಳಿಯು ವೈರಸ್‌ನ ಅಪಾಯಕಾರಿ ಸಾಂದ್ರತೆಯನ್ನು ಕಡಿಮೆ ಮಾಡಬಹುದು ಎಂದು ಮಾರ್ಗಸೂಚಿ ತಿಳಿಸಿದ್ದು, ಕೋಣೆಯ ಕಿಟಕಿಗಳು ಮತ್ತು ಬಾಗಿಲುಗಳು ಮುಚ್ಚಲ್ಪಟ್ಟಿದ್ದರೆ, ಫ್ಯಾನ್ ನಿರಂತರವಾಗಿ ಚಲಿಸುತ್ತಿರಬೇಕು, ಗಾಳಿ ಸರಾಗವಾಗಿ ಹೋಗುತ್ತಿರಬೇಕು ಎಂದು ಮಾರ್ಗಸೂಚಿ ಹೇಳಿದೆ.

-ಕೆಲಸ ಮಾಡುವ ಕಚೇರಿಯಲ್ಲಿ ಕೂಡ ಗಾಳಿ ಸರಾಗವಾಗಿ ಹೊರಗಿನಿಂದ ಬೀಸುತ್ತಿರುವಂತೆ ನೋಡಿಕೊಳ್ಳಿ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

-ಹನಿಗಳು ಮತ್ತು ಕಣಗಳ ರೂಪದಲ್ಲಿ ಲಾಲಾರಸ ಮತ್ತು ಮೂಗಿನ ವಿಸರ್ಜನೆ ವೈರಸ್ ಅನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುತ್ತದೆ. ದೊಡ್ಡ ಗಾತ್ರದ ಹನಿಗಳು ನೆಲಕ್ಕೆ ಮತ್ತು ಮೇಲ್ಮೈಗಳಲ್ಲಿ ಬೀಳುತ್ತವೆ, ಮತ್ತು ಸಣ್ಣ ವೈರಸ್ ಕಣಗಳು ಗಾಳಿಯಲ್ಲಿ ಹೆಚ್ಚಿನ ದೂರಕ್ಕೆ ಸಾಗುತ್ತದೆ. ಮುಚ್ಚಿದ ಒಳಾಂಗಣ ಸ್ಥಳಗಳಲ್ಲಿ, ಹನಿಗಳು ಮತ್ತು ಕಣಗಳು ತ್ವರಿತವಾಗಿ ಹರಡುವ ಸಾಧ್ಯತೆ ಹೆಚ್ಚು ಎಂದು ಮಾರ್ಗಸೂಚಿ ಹೇಳುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com