ಲಸಿಕೆ: ಸಂಸ್ಥೆಯ ನಿರ್ದೇಶಕರಿಂದ ಸರ್ಕಾರದ ವಿರುದ್ಧ ಟೀಕೆ, ಅಂತರ ಕಾಯ್ದುಕೊಂಡ ಸೆರಮ್ ಇನ್ಸ್ಟಿಟ್ಯೂಟ್!
ನವದೆಹಲಿ: ಕೋವಿಡ್-19 ಲಸಿಕೆ ಅಭಿಯಾನದ ವಿಷಯದಲ್ಲಿ ಸರ್ಕಾರವನ್ನು ಟೀಕಿಸಿದ್ದ ಸೆರಮ್ ಇನ್ಸ್ಟಿಟ್ಯೂಟ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರ ಹೇಳಿಕೆಯಿಂದ ಸಂಸ್ಥೆ ಅಂತರ ಕಾಯ್ದುಕೊಂಡಿದೆ.
ಲಸಿಕೆ ಲಭ್ಯತೆಯನ್ನು ಪರಿಗಣಿಸದೇ ಸರ್ಕಾರ ಹಲವು ವಯಸ್ಸಿನ ಗುಂಪುಗಳಿಗೆ ಲಸಿಕೆ ನೀಡುವುದಕ್ಕೆ ಪ್ರಾರಂಭಿಸಿತ್ತು ಎಂದು ಸೆರಂ ಇನ್ಸ್ಟಿಟ್ಯೂಟ್ ನ ಕಾರ್ಯಕಾರಿ ನಿರ್ದೇಶಕ ಸುರೇಶ್ ಜಾದವ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯಿಂದ ಸಂಸ್ಥೆ ಅಂತರ ಕಾಯ್ದುಕೊಂಡಿದ್ದು, ಸಿಇಒ ನೀಡಿರುವ ಹೇಳಿಕೆ ಸಂಸ್ಥೆಯ ದೃಷ್ಟಿಕೋನವಲ್ಲ ಎಂದು ಸ್ಪಷ್ಟನೆ ನೀಡಿದೆ.
ಮೇ.22 ರಂದು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿರುವ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸರ್ಕಾರಿ ಹಾಗೂ ನಿಯಂತ್ರಕ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಪತ್ರ ಬರೆದಿದ್ದು, ಸಂಸ್ಥೆಯ ನಿರ್ದೇಶಕ ಸುರೇಶ್ ಜಾದವ್ ಸರ್ಕಾರದ ಬಗ್ಗೆ ನೀಡಿದ ಹೇಳಿಕೆ ಸಂಸ್ಥೆಯ ನಮ್ಮ ಸಂಸ್ಥೆಯ ದೃಷ್ಟಿಕೋನವಲ್ಲ, ಈ ಹೇಳಿಕೆಯಿಂದ ನಾವು ಅಂತರ ಕಾಯ್ದುಕೊಳ್ಳುತ್ತಿದ್ದೇವೆ ಎಂದು ಸಿಇಒ ಅದಾರ್ ಸಿ ಪೂನಾವಾಲಾ ಪರವಾಗಿ ಹೇಳಲು ಬಯಸುತ್ತೇವೆ" ಎಂದು ತಿಳಿಸಿದ್ದಾರೆ. ಸಂಸ್ಥೆಯ ಕೋವಿಡ್-19 ಲಸಿಕೆ ಕೋವಿಶೀಲ್ಡ್ ಉತ್ಪಾದನೆಯನ್ನು ಹೆಚ್ಚಿಸಲು ಸಂಸ್ಥೆ ಬದ್ಧವಾಗಿದೆ ಎಂದು ಸೆರಮ್ ಇನ್ಸ್ಟಿಟ್ಯೂಟ್ ಹೇಳಿದ್ದು, ಪೂನಾವಾಲಾ ಅವರೇ ಸಂಸ್ಥೆಯ ಅಧಿಕೃತ ವಕ್ತಾರರು ಎಂದೂ ಎಸ್ಐಐ ಸ್ಪಷ್ಟನೆ ನೀಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ