
ರಾಂಚಿ: ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‌ಬಿ) ತಮ್ಮ ಹಿರಿಯ ಅಧಿಕಾರಿಯೊಬ್ಬರು ರಜೆ ನಿರಾಕರಿಸಿದ್ದರಿಂದ ಆಕ್ಸಿಜನ್ ಬೆಂಬಲದೊಂದಿಗೆ ಕೆಲಸಕ್ಕೆ ಬರಬೇಕಾಯಿತು ಎಂದು ಬ್ಯಾಂಕ್ ನೌಕರ ಅರವಿಂದ್ ಕುಮಾರ್ ಮಾಡಿರುವ ಆರೋಪಗಳನ್ನು ಪಿಎನ್‌ಬಿ ನಿರಾಕರಿಸಿದ್ದಾರೆ.
ಪಿಎನ್‌ಬಿ ಬೊಕಾರೊ ಸರ್ಕಲ್ ಕಚೇರಿ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟನೆ ಪ್ರಕಾರ, ಕುಮಾರ್ ಅವರು ಬ್ಯಾಂಕ್ ಅಧಿಕಾರಿಗಳನ್ನು ಮತ್ತು ಬ್ಯಾಂಕನ್ನು ದೂಷಿಸುವುದು ಅಲ್ಲದೆ ತಮ್ಮ ವಿರುದ್ಧ ಇರುವ ಎನ್ ಪಿಎ ಸಾಲ ಖಾತೆಗಳ ಮರುಪಡೆಯುವಿಕೆ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಒತ್ತಡ ಹೇರಲು ಈ ನಾಟಕವಾಡಿದ್ದಾರೆ ಎಂದು ತಿಳಿಸಿದೆ.
ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿರುವ ಕುಮಾರ್ ಅದಾಗಲೇ ರಾಜೀನಾಮೆಯನ್ನು ಸಲ್ಲಿಸಿದ್ದಾರೆ. ಆದರೆ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರುವುದರಿಂದ ಅದನ್ನು ತಿರಸ್ಕರಿಸಲಾಗಿದೆ. ಇದಲ್ಲದೆ, ಅವರು ಬ್ಯಾಂಕಿನಿಂದ ಎರಡು ವರ್ಷಗಳವರೆಗೆ ಅನುಮತಿಯಿಲ್ಲದೆ ಗೈರುಹಾಜರಾಗಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ನಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಧಿಕಾರಿಗಳು ಆದೇಶಿಸುವುದು ತಪ್ಪು. ಇನ್ನು ಕೋವಿಡ್ ನಿಂದ ಚೇತರಿಸಿಕೊಳ್ಳುತ್ತಿರುವ ಉದ್ಯೋಗಿಗಳಿಗೆ ಪಾವತಿ ರಜೆ ನೀಡಲಾಗುತ್ತಿದೆ. ಇಂತಹ ಸಮಯದಲ್ಲಿ ಮೇಲಧಿಕಾರಿಗಳ ವಿರುದ್ಧ ಆರೋಪ ಮಾಡುವುದು ಆಧಾರರಹಿತವಾಗಿದೆ ಎಂದು ತಿಳಿಸಿದೆ.
ಪಿಎನ್‌ಬಿ ಅಧಿಕಾರಿಗಳ ಪ್ರಕಾರ, ಬ್ಯಾಂಕ್ ಮತ್ತು ಅಧಿಕಾರಿಗಳ ಬಗ್ಗೆ ತಪ್ಪು ಮಾಹಿತಿ ಹರಡಲು ಈ ರೀತಿ ನಾಟಕವಾಡಲಾಗಿದೆ. ಮಂಗಳವಾರ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಸೆಕ್ಟರ್ 4 ಶಾಖೆಯಲ್ಲಿ ಈ ಘಟನೆ ನಡೆದಿದೆ. ಕುಮಾರ್ ಅವರು ಕೋವಿಡ್ -19 ನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೆ ಶ್ವಾಸಕೋಶಗಳು ಇನ್ನೂ ಸೋಂಕಿಗೆ ಒಳಗಾಗಿರುವುದರಿಂದ ಮನೆಯಲ್ಲಿ ಆಮ್ಲಜನಕದ ನೆರವಿನೊಂದಿಗೆ ಉಸಿರಾಡುತ್ತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ತಮಗೆ ಬ್ಯಾಂಕ್ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಡ ಹೇರುತ್ತಿದ್ದು, ತಮ್ಮ ಹಿರಿಯ ಅಧಿಕಾರಿಗಳು ರಜೆ ನಿರಾಕರಿಸಿದ್ದರಿಂದ ತಮ್ಮ ಕುಟುಂಬ ಸದಸ್ಯರೊಂದಿಗೆ ಆಮ್ಲಜನಕದ ಬೆಂಬಲದೊಂದಿಗೆ ಕೆಲಸಕ್ಕೆ ಹಾಜರಾಗಬೇಕಾಯಿತು ಎಂದು ಕುಮಾರ್ ಹೇಳಿದರು.
Advertisement