ಸಲ್ಮಾನ್ ಖುರ್ಷಿದ್ ಹಿಂದೂಗಳ ಕ್ಷಮೆ ಕೇಳಬೇಕು: ಅಖಾಡ ಪರಿಷತ್ ಬಿಗಿ ಪಟ್ಟು
ಡೆಹ್ರಾಡೂನ್: ಹಿಂದುತ್ವವನ್ನು ಐಎಸ್ಐಎಸ್ ಹಾಗೂ ಬೊಕೊ ಹರಾಮ್ ನಂತಹ ಇಸ್ಲಾಮಿಕ್ ಉಗ್ರ ಸಂಘಟನೆಗಳಿಗೆ ಹೋಲಿಕೆ ಮಾಡಿರುವ ಸಲ್ಮಾನ್ ಖುರ್ಷಿದ್ ಹಿಂದೂಗಳ ಕ್ಷಮೆ ಕೋರಬೇಕು ಎಂದು ಅಖಾಡ ಪರಿಷತ್ ಬಿಗಿ ಪಟ್ಟು ಹಿಡಿದಿದೆ.
ಅಖಿಲ ಭಾರತೀಯ ಅಖಾಡ ಪರಿಷತ್ ನ ಅಧ್ಯಕ್ಷರಾದ ಮಹಾಂತ್ ರವೀಂದ್ರ ಪುರಿ ಸಲ್ಮಾನ್ ಖುರ್ಷಿದ್ ಅವರ Sunrise Over Ayodhya: Nationhood in Our Times ಎಂಬ ಪುಸ್ತಕವನ್ನು ಓದಿದ ನಂತರ ಮುಂದಿನ ಕ್ರಮಗಳನ್ನು ಪರಿಗಣಿಸುವುದಾಗಿ ತಿಳಿಸಿದ್ದಾರೆ.
"ಅಸಂಬದ್ಧ ಹಾಗೂ ಆಕ್ಷೇಪಾರ್ಹ ಹೋಲಿಕೆಗಾಗಿ ಸಲ್ಮಾನ್ ಖುರ್ಷಿದ್ ಹಿಂದೂಗಳಲ್ಲಿ ಕ್ಷಮೆ ಯಾಚಿಸಬೇಕು, ಈ ರೀತಿಯ ನಡೆಗಳಿಂದ ಭಾರತೀಯ ಸಮಾಜದಲ್ಲಿ ಭಿನ್ನಾಭಿಪ್ರಾಯವನ್ನು ಸೃಷ್ಟಿಸುವುದಕ್ಕೆ ಸಂತರು, ಸನ್ಯಾಸಿಗಳು ಬಿಡುವುದಿಲ್ಲ, ನಮ್ಮದು ಸನಾತನ ಸಂಸ್ಕೃತಿಯ ಸಮಾಜವಾಗಿದ್ದು, ಜಗತ್ತಿನಾದ್ಯಂತ ಶಾಂತಿ, ಸಮೃದ್ಧಿಯನ್ನು ಹರಡುವ ಸಂಸ್ಕೃತಿಯಾಗಿದೆ" ಎಂದು ಮಹಾಂತ್ ಪುರಿ ಹೇಳಿದ್ದಾರೆ.
ಇದೇ ವೇಳೆ ಧ್ವಂಸಗೊಂಡಿದ್ದ ಸಲ್ಮಾನ್ ಖುರ್ಷಿದ್ ಅವರ ನಿವಾಸಕ್ಕೆ ರಾಜ್ಯ ಪೊಲೀಸರು, ವಿಧಿವಿಜ್ಞಾನ ತಂಡದ ಅಧಿಕಾರಿಗಳು ಭೇಟಿ ನೀಡಿದ್ದು, 7 ಖಾಲಿ ಕಾರ್ಟಿಡ್ಜ್ ಗಳನ್ನು ಹಾಗೂ 32 ಬೋರ್ ಬುಲೆಟ್, ಒಂದು ಜೀವಂತ ಬುಲೆಟ್ ಮುಂತಾದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
7 ಕಿಟಕಿಗಳ ಗಾಜು ಮುರಿದಿದ್ದು, ಬಾಗಿಲು ಅಗ್ನಿಗೆ ಆಹುತಿಯಾಗಿದೆ. ಸಲ್ಮಾನ್ ಖುರ್ಷಿದ್ ಅವರ ನಿವಾಸದಲ್ಲಿನ ವಸ್ತುಗಳಿಗೆ ಭದ್ರತೆಯನ್ನು ನೀಡಲಾಗಿದೆ.
ಸಲ್ಮಾನ್ ಖುರ್ಷಿದ್ ಅವರ ನಿವಾಸ ಧ್ವಂಸಗೊಂಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಇದಕ್ಕೂ ಮುನ್ನ ಬಿಜೆಪಿಯ ಧ್ವಜ ಹಿಡಿದಿದ್ದ ಒಂದು ಗುಂಪು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಿದ್ದು ಖುರ್ಷಿದ್ ಅವರನ್ನು ಪಾಕಿಸ್ತಾನದ ಪಕ್ಷಪಾತಿ ವ್ಯಕ್ತಿ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ