ಪುಟಿನ್ ಭಾರತ ಭೇಟಿ: ರಷ್ಯಾ-ಭಾರತದ 5 ಸಾವಿರ ಕೋಟಿ ರೂ. ಮೌಲ್ಯದ AK-203 ಒಪ್ಪಂದಕ್ಕೆ ತಯಾರಿ
ನವದೆಹಲಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಡಿ.05 ರಿಂದ ಭಾರತ ಪ್ರವಾಸ ಕೈಗೊಳ್ಳುತ್ತಿದ್ದು, 5,000 ಕೋಟಿ ರೂಪಾಯಿ ಮೌಲ್ಯದ ಎಕೆ-203 ಅಸಾಲ್ಟ್ ರೈಫಲ್ಸ್ ಗಳ ಪೂರೈಕೆ ಒಪ್ಪಂದವನ್ನು ಅಂತಿಮಗೊಳಿಸಲು ತಯಾರಿ ನಡೆಸಲಾಗುತ್ತಿದೆ.
ಒಪ್ಪಂದಕ್ಕೆ ಸಂಬಂಧಿಸಿದಂತೆ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಉನ್ನತ ಮಟ್ಟದ ಸಭೆ ನಡೆಸುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ, ರಷ್ಯಾ ಉತ್ತರ ಪ್ರದೇಶದ ಅಮೇಥಿಯಲ್ಲಿ 7.5 ಲಕ್ಷ ಎಕೆ-203 ಅಸಾಲ್ಟ್ ರೈಫಲ್ಸ್ ಗಳನ್ನು ಉತ್ಪಾದಿಸಲಿದೆ.
ಈ ಒಪ್ಪಂದದ ಸಂಬಂಧ ರಕ್ಷಣಾ ಸಚಿವಾಲಯದ ರಕ್ಷಣಾ ಉಪಕರಣಗಳ ಸ್ವಾಧೀನ ಪರಿಷತ್ ನ ವಿಶೇಷ ಸಭೆ ನ.23 ರಂದು ನಡೆಯಲಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.
ರಷ್ಯಾ ವಿನ್ಯಾಸ ಮಾಡಿರುವ ಎಕೆ-203 ರೈಫಲ್ಸ್ ಗಳನ್ನು ಉತ್ತರ ಪ್ರದೇಶದ ಅಮೇಥಿಯಲ್ಲಿ ತಯಾರಿಸಲಾಗುತ್ತದೆ. ಕೆಲವು ವರ್ಷಗಳ ಹಿಂದೆ ಈ ಒಪ್ಪಂದದ ಬಗ್ಗೆ ಭಾರತ- ರಷ್ಯಾದ ನಡುವೆ ಮಾತುಕತೆಯಾಗಿತ್ತು. ತಂತ್ರಜ್ಞಾನದ ವರ್ಗಾವಣೆ ವಿಷಯವಾಗಿ ಇರುವ ಸಮಸ್ಯೆ, ಸವಾಲುಗಳನ್ನು ಪರಿಹರಿಸುವುದಕ್ಕಾಗಿ ಅಂತಿಮ ಹಂತದ ಮಾತುಕತೆ ನಡೆಯಬೇಕಿದೆ ಎಂದು ರಕ್ಷಣಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾರತ ಸೇನೆ 7.5 ಲಕ್ಷ ರೈಫಲ್ ಗಳನ್ನು ಪಡೆಯುತ್ತಿದ್ದರೂ, ತಂತ್ರಜ್ಞಾನದ ವರ್ಗಾವಣೆ ಕ್ರಮೇಣವಾಗಿ ನಡೆಯಬೇಕಿರುವುದರಿಂದ ಮೊದಲ 70,000 ರೈಫಲ್ ಗಳಲ್ಲಿ ರಷ್ಯಾ ನಿರ್ಮಿತ ಘಟಕಗಳಿಂದ (components) ನಿರ್ಮಿತವಾಗಿರಲಿದೆ. ಉತ್ಪಾದನೆ ಪ್ರಕ್ರಿಯೆ ಪ್ರಾರಂಭವಾದ 32 ತಿಂಗಳುಗಳಲ್ಲಿ ಈ ರೈಫಲ್ಸ್ ಗಳನ್ನು ಭಾರತೀಯ ಸೇನೆಗೆ ನೀಡಲಾಗುತ್ತದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ