ಸ್ಥೂಲಕಾಯವೆಂದು ಅವಮಾನ, ಕಿರುಕುಳ, ಪತಿಯ ಮನೆಯಲ್ಲಿ 19 ವರ್ಷದ ಯುವತಿ ಅನುಮಾನಾಸ್ಪದ ಸಾವು!
ಪಾಲಕ್ಕಾಡ್: ಗಂಡನ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ 19 ವರ್ಷದ ಯುವತಿಯ ಪೋಷಕರು ಆಕೆಯ ಸಾವಿನ ವಿಷಯವಾಗಿ ಹಲವಾರು ಅನುಮಾನಗಳನ್ನು ಹೊರಹಾಕಿದ್ದಾರೆ.
ಘಟನೆ ಪಾಲಕ್ಕಾಡ್ ನ ಮನ್ಕುರಿಸ್ಸಿಯಲ್ಲಿ ವರದಿಯಾಗಿದ್ದು, ನಫಿಯಾ ಮೃತ ಯುವತಿಯಾಗಿದ್ದು, ಆಕೆ ಸ್ಥೂಲ ಕಾಯದಿಂದಾಗಿ ಗರ್ಭಿಣಿಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಪತಿಯ ಮನೆಯಲ್ಲಿ ಮೂದಲಿಸುತ್ತಿದ್ದರು ಎಂದು ಆಕೆಯ ಸಹೋದರ ನಾಫ್ಸಲ್ ಆರೋಪಿಸುತ್ತಿದ್ದಾರೆ. ಅಬ್ದುಲ್ ರೆಹಿಮಾನ್ ಅವರ ಪುತ್ರಿ ನಾಫಿಯಾ ಮುಜೀಬ್ ಎಂಬಾತನನ್ನು 10 ತಿಂಗಳ ಹಿಂದೆ ವಿವಾಹವಾಗಿದ್ದರು.
ಪಾಲಕ್ಕಾಡ್ ನ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದರು. ಆಕೆಯ ಪತಿ ನೀಡಿರುವ ಹೇಳಿಕೆಯ ಪ್ರಕಾರ ಮುಜೀಬ್ ನ.25 ರಂದು ಮನೆಗೆ ತಡವಾಗಿ ಬಂದಿದ್ದಾರೆ. ಬೆಡ್ ರೂಮ್ ನ ದ್ವಾರ ಒಳಗಡೆಯಿಂದ ಬಂದ್ ಆಗಿತ್ತು. ಬಾಗಿಲು ಮುರಿದು ಒಳಪ್ರವೇಶಿಸಿದ ಆತನಿಗೆ ಕಂಡಿದ್ದು ನೇಣು ಬಿಗಿದ ಸ್ಥಿತಿಯಲ್ಲಿದ್ದ ನಾಫಿಯಾ.
ತಕ್ಷಣ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಆದರೆ ಉಳಿಸಲು ಸಾಧ್ಯವಾಗಿಲ್ಲ. ಆಕೆಯ ಸಾವಿನ ಬಗ್ಗೆ ತನಿಖೆಯಾಗಬೇಕೆಂದು ಯುವತಿಯ ಪೋಷಕರು ಆಗ್ರಹಿಸಿದ್ದಾರೆ. ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು ತನಿಖೆ ಪ್ರಾರಂಭಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ