ಕೃಷಿ ಕಾಯ್ದೆಗಳನ್ನು ತಡೆಹಿಡಿಯಲಾಗಿದೆ; ನಿಮ್ಮ ಪ್ರತಿಭಟನೆ ಯಾವುದರ ವಿರುದ್ಧ: ರೈತರ ಸಂಘಕ್ಕೆ 'ಸುಪ್ರೀಂ' ಪ್ರಶ್ನೆ
ನವದೆಹಲಿ: ಮೂರು ಹೊಸ ಕೃಷಿ ಕಾನೂನುಗಳನ್ನು ಈಗಾಗಲೇ ತಡೆಹಿಡಿಯಲಾಗಿದೆ. ಶಾಸನಗಳೇ ಚಾಲ್ತಿಯಲ್ಲಿಲ್ಲದಿದ್ದಾಗ ನೀವು ಯಾವುದರ ವಿರುದ್ಧ ಪ್ರತಿಭಟಿಸುತ್ತಿದ್ದೀರಾ ಎಂದು ರೈತರ ಸಂಘಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.
ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ಸಿ ಟಿ ರವಿಕುಮಾರ್ ಅವರನ್ನೊಳಗೊಂಡ ನ್ಯಾಯಪೀಠವು ಕಾನೂನುಗಳ ಸಿಂಧುತ್ವವನ್ನು ಪ್ರಶ್ನಿಸಿ ಈಗಾಗಲೇ ನ್ಯಾಯಾಲಯದ ಮೆಟ್ಟಿಲೇರಿದ ಮೇಲೂ ಪ್ರತಿಭಟನೆ ನಡೆಸುವ ಪ್ರಶ್ನೆಯಿದೆಯಾ ಎಂದು ಹೇಳಿದರು.
ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ನಿನ್ನೆ ಲಖಿಂಪುರ್ ಖೇರಿಯಲ್ಲಿ ನಡೆದಿದ್ದ ಹಿಂಸಾಚಾರವನ್ನು ಉಲ್ಲೇಖಿಸಿದ್ದು ಅಂತಹ ಘಟನೆಗಳು ಸಂಭವಿಸಿದಾಗ ಯಾರೂ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಎಂದು ಪೀಠ ಹೇಳಿತು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಪೀಠಕ್ಕೆ ಒಮ್ಮೆ ಈ ವಿಷಯವು ಅತ್ಯುನ್ನತ ಸಾಂವಿಧಾನಿಕ ನ್ಯಾಯಾಲಯದ ಮುಂದೆ ಇದ್ದಾಗ, ಅದೇ ವಿಷಯದ ಮೇಲೆ ಯಾರೂ ಬೀದಿಗಿಳಿಯುವಂತಿಲ್ಲ ಎಂದು ಹೇಳಿದರು.
ಮೂರು ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಮತ್ತು ಇಲ್ಲಿನ ಜಂತರ್ ಮಂತರ್‌ನಲ್ಲಿ 'ಸತ್ಯಾಗ್ರಹ' ನಡೆಸಲು ಅನುಮತಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ರೈತರು ಮತ್ತು ಕೃಷಿಕರ ಸಂಘಟನೆಯಾದ 'ಕಿಸಾನ್ ಮಹಾಪಂಚಾಯತ್' ಮತ್ತು ಅದರ ಅಧ್ಯಕ್ಷರು ಶಾಂತಿಯುತ ಮತ್ತು ಅಹಿಂಸಾತ್ಮಕ 'ಸತ್ಯಾಗ್ರಹ'ವನ್ನು ಆಯೋಜಿಸಲು ಜಂತರ್ ಮಂತರ್‌ನಲ್ಲಿ ಕನಿಷ್ಠ 200 ರೈತರು ಅಥವಾ ಪ್ರತಿಭಟನಾಕಾರರಿಗೆ ಸ್ಥಳಾವಕಾಶ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನಗಳನ್ನು ಕೋರಿದ್ದರು.
ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ(ಬಡ್ತಿ ಮತ್ತು ಸೌಲಭ್ಯ) ಕಾಯ್ದೆ 2020, ಅಗತ್ಯ ಸರಕುಗಳ(ತಿದ್ದುಪಡಿ) ಕಾಯ್ದೆ 2020 ಮತ್ತು ರೈತರ(ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಒಪ್ಪಂದ ಸೇವಾ ಕಾಯ್ದೆ 2020ಗಳನ್ನು ವಿರೋಧಿ ದೆಹಲಿಯ ಗಡಿಯಲ್ಲಿ ಹಲವಾರು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ