ಕೇರಳದ ಕೇಂದ್ರ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಕೊಟ್ಟಾಯಂ ನಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆ.
ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತ ಕಂಡಿರುವ ಪರಿಣಾಮ 10 ಮಂದಿ ನಾಪತ್ತೆಯಾಗಿದ್ದಾರೆ. ಕೊಟ್ಟಾಯಂ-ಇಡುಕ್ಕಿ ಜಿಲ್ಲೆಗಳ ಗಡಿ ಭಾಗಗಳಲ್ಲಿ ಭೂಕುಸಿತ ಕಂಡಿದ್ದು ಆತಂಕಕಾರಿ ಪರಸ್ಥಿತಿಯ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚಾರಣೆಗೆ ರಾಜ್ಯ ಸರ್ಕಾರ ಸೇನೆ ಹಾಗೂ ವಾಯುಪಡೆ ನೆರವು ಕೋರಿದೆ. ಸಿಎಂ ಕಚೇರಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೊಟ್ಟಾಯಂ-ಇಡುಕ್ಕಿ ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದ್ದು ಕೆಲವು ಕುಟುಂಬಗಳು ಪ್ರತ್ಯೇಕಗೊಂಡಿವೆ.
ಕೂಟ್ಟಿಕಲ್ ಮತ್ತು ಪೆರುವಂತನಂ ಗಳಲ್ಲೂ ಭೂ ಕುಸಿತ ಉಂಟಾಗಿದ್ದು ಈ ಘಟನೆಗಳಲ್ಲಿ 10 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಸಂಬಂಧ ಭಾರತೀಯ ವಾಯುಪಡೆ ಹಾಗೂ ಸೇನೆ ಪ್ರತಿಕ್ರಿಯೆ ನೀಡಿದ್ದು, ನೆರವು ನೀಡುವುದಾಗಿ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಮಿ-17 ಹಾಗೂ ಸಾರಂಗ್ ಹೆಲಿಕಾಫ್ಟರ್ ಗಳನ್ನು ಈಗಾಗಲೇ ಸ್ಟ್ಯಾಂಡ್ ಬೈ ಮೋಡ್ ನಲ್ಲಿ ಇರಿಸಲಾಗಿದೆ. ದಕ್ಷಿಣ ಏರ್ ಕಮಾಂಡ್ ನ ಅಡಿಯಲ್ಲಿ ಬರುವ ಎಲ್ಲಾ ಬೇಸ್ ಗಳಲ್ಲೂ ಹೈ ಅಲರ್ಟ್ ಘೋಷಣೆ ಮಾಡಿದೆ ಎಂದು ವಕ್ತಾರರು ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಈಗಾಗಲೇ ಸೇನೆಯನ್ನು ನಿಯೋಜಿಸಲಾಗಿದೆ. ಒಂದು ಕಾಲಂ ನಲ್ಲಿ ಓರ್ವ ಅಧಿಕಾರಿ, 2 ಜೆಸಿಒಗಳು ಹಾಗೂ 30 ಇನ್ನಿತರ ಶ್ರೇಣಿಯ ಸೇನಾ ಅಧಿಕಾರಿಗಳು ಈಗಾಗಲೇ ಕಂಜೀರಪ್ಪಳ್ಳಿ, ಕೊಟ್ಟಾಯಂ ಜಿಲ್ಲೆ ಪಾಂಗೋಡ್ ಸೇನಾ ಕೇಂದ್ರಕ್ಕೆ ತೆರಳಿದ್ದಾರೆ.
Advertisement