ಲಖಿಂಪುರ್ ಹಿಂಸಾಚಾರ: ಪುತ್ರನ ಬಂಧನದ ನಂತರವೂ ಕೇಂದ್ರ ಸಚಿವರನ್ನು ವಜಾಗೊಳಿಸದ ಮೋದಿಗೆ "ನಾಚಿಕೆಯಾಗಬೇಕು" - ಕಾಂಗ್ರೆಸ್

ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಬರ್ಬರ ಹತ್ಯೆ ಕೇಂದ್ರ ಸರ್ಕಾರದ "ದುರಹಂಕಾರ"ದ ಮುಂದುವರಿದ ಭಾಗವಾಗಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ ಮತ್ತು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ...
ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ
ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆ

ನವದೆಹಲಿ: ಲಖಿಂಪುರ್ ಖೇರಿಯಲ್ಲಿ ನಡೆದ ರೈತರ ಬರ್ಬರ ಹತ್ಯೆ ಕೇಂದ್ರ ಸರ್ಕಾರದ "ದುರಹಂಕಾರ"ದ ಮುಂದುವರಿದ ಭಾಗವಾಗಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ ಮತ್ತು ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಲಖಿಂಪುರ್ ಖೇರಿ ಹಿಂಸಾಚಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ರನನ್ನು ಬಂಧಿಸಿದ ನಂತರವೂ ಕೇಂದ್ರ ಸಚಿವರನ್ನು ತಮ್ಮ ಸಂಪುಟದಿಂದ ವಜಾಗೊಳಿಸದ ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ ವರ್ಕಿಂಗ್ ಕಮಿಟಿ(ಸಿಡಬ್ಲ್ಯೂಸಿ) ಟೀಕಿಸಿದೆ.

ಖಲಿಂಪುರ್ ಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಸಿಡಬ್ಲ್ಯೂಸಿ ನಿರ್ಣಯ ಅಂಗೀಕರಿಸಿದ್ದು, ಕಳೆದ ಏಳು ವರ್ಷಗಳಲ್ಲಿ 'ಅನ್ನದಾತರು' ಮತ್ತು ಭೂರಹಿತ ಕೃಷಿ ಕಾರ್ಮಿಕರ ಜೀವನೋಪಾಯದ ಮೇಲೆ ದಾಳಿ ಮಾಡಿದ "ಪೈಶಾಚಿಕ ಕೃತ್ಯಕ್ಕೆ" ಇದು ಸಾಕ್ಷಿಯಾಗಿದೆ ಎಂದು ಆರೋಪಿಸಿದೆ.

ಅಕ್ಟೋಬರ್ 3 ರಂದು ನಡೆದ ಲಖಿಂಪುರ್ ಖೇರಿ ಹಿಂಸಾಚಾರದಲ್ಲಿ ಎಂಟು ಜನರು ಸಾವನ್ನಪ್ಪಿದ್ದು, ಅವರಲ್ಲಿ ನಾಲ್ವರು ರೈತರನ್ನು ಬಿಜೆಪಿ ಕಾರ್ಯಕರ್ತರು ವಾಹನ ಹರಿಸಿ ಹತ್ಯೆ ಮಾಡಿದ್ದಾರೆ ಎಂದು ಸಿಡಬ್ಲ್ಯೂಸಿ ಹೇಳಿದೆ. "ರೈತರ ಈ ಕ್ರೂರ ಹತ್ಯೆ ಮೋದಿ ಸರ್ಕಾರದ ಅಹಂಕಾರದ ಮುಂದುವರಿದ ಭಾಗ" ಎಂದಿದೆ.

ಲಖಿಂಪುರ್ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರೇ ಆರೋಪಿಯಾಗಿದ್ದು, ಪ್ರಮುಖ ಆರೋಪಿ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಗನ ಬಂಧನವಾಗಿದ್ದರೂ ಮತ್ತು ಸಾರ್ವಜನಿಕ ಒತ್ತಡದ ಹೊರತಾಗಿಯೂ ಪ್ರಧಾನಿ ಮೋದಿ ಅವರು "ನಾಚಿಕೆಯಿಲ್ಲದೆ" ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಲು ನಿರಾಕರಿಸಿದ್ದಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com