ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಅಸ್ಸಾಂ ಸಿಎಂ ಹಿಮಂತ ಶರ್ಮಾಗೆ ಎಚ್ಚರಿಕೆ ನೀಡಿದ ಚುನಾವಣಾ ಆಯೋಗ
ನವದೆಹಲಿ: ಅಕ್ಟೋಬರ್ 30 ರಂದು ನಡೆಯಲಿರುವ ವಿಧಾನಸಭಾ ಉಪಚುನಾವಣೆಯ ಪ್ರಚಾರದ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದ ಅಸ್ಸಾಂ ಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ಹಿಮಂತ ಬಿಸ್ವಾ ಶರ್ಮಾ ಅವರಿಗೆ ಚುನಾವಣಾ ಆಯೋಗ ಬುಧವಾರ ಕೇವಲ ಎಚ್ಚರಿಕೆ ನೀಡಿ ಕೈಬಿಟ್ಟಿದೆ.
ಬಿಜೆಪಿಯ ಸ್ಟಾರ್ ಪ್ರಚಾರಕ ಶರ್ಮಾ ಅವರು ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಆಯೋಗ ನೀಡಿರುವ ಸಲಹೆ/ಸೂಚನೆಗಳಿಗೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.
"ಈಗ, ಆಯೋಗವು ಅವರಿಗೆ ಎಚ್ಚರಿಕೆಯನ್ನು ನೀಡುತ್ತದೆ ಮತ್ತು ಭವಿಷ್ಯದಲ್ಲಿ ಹೆಚ್ಚು ಜಾಗರೂಕರಾಗಿರುವಂತೆ ಮತ್ತು ಸಂಯಮದಿಂದ ವರ್ತಿಸುವಂತೆ ಹಾಗೂ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುವಾಗ ಚುನಾವಣಾ ನೀತಿ ಸಂಹಿತೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಎಚ್ಚರಿಕೆ ನೀಡಲಾಗಿದೆ" ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಉಪಚುನಾವಣೆಯ ಪ್ರಚಾರದ ವೇಳೆ ರಸ್ತೆಗಳು ಮತ್ತು ಇತರ ಅಭಿವೃದ್ಧಿ ಯೋಜನೆಗಳ ಅನುಷ್ಠಾನದ ಭರವಸೆ ನೀಡುವ ಮೂಲಕ ಚುನಾವಣಾ ನೀತಿ ಸಂಹತಿಯನ್ನು ಉಲ್ಲಂಘಿಸಿದ್ದ ಶರ್ಮಾ ಅವರಿಗೆ ಚುನಾವಣಾ ಆಯೋಗ ಸೋಮವಾರ ಶೋಕಾಸ್ ನೋಟಿಸ್ ನೀಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ