ವಾಮಾಚಾರ ಮಾಡಿರುವ ಶಂಕೆ: ವೃದ್ಧನ ಮೇಲೆ ಹಲ್ಲೆ ನಡೆಸಿದ ಎಂಜಿನಿಯರ್ ಯುವಕ

ಆರೋಪಿ ಸುಧಾಂಶು ಕಳೆದ ಹಲವು ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೊಟ್ಟೆನೋವಿಗೆ ನಾರಾಯಣ್ ಎಂಬ ವ್ಯಕ್ತಿ ಮಾಡಿಸಿದ ವಾಮಾಚಾರವೇ ಕಾರಣ ಎಂದು ಆತ ನಂಬಿದ್ದ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಾಜ್ ಪುರ್: ಮೂಢನಂಬಿಕೆ ಎನ್ನುವುದು ಅಶಿಕ್ಷಿತ ವರ್ಗಕ್ಕೆ ಸೀಮಿತವಾಗಿಲ್ಲ, ಸುಶಿಕ್ಷಿತ ವರ್ಗದವರೂ ಮೂಢನಂಬಿಕೆಯನ್ನು ಹೊಂದಿರುತ್ತಾರೆ ಎನ್ನುವುದಕ್ಕೆ ಸ್ಪಷ್ಟ ನಿರ್ದರ್ಶನ ಇಲ್ಲಿದೆ. ತನ್ನ ವಿರುದ್ಧ ವಾಮಾಚಾರ ಮಾಡಿಸಿದ್ದಾನೆ ಎನ್ನುವ ಗುಮಾನಿ ಮೇಲೆ ಓರ್ವ ಎಂಜಿನಿಯರ್ ಉದ್ಯೋಗಿ ಹಿರಿಯ ವ್ಯಕ್ತಿ ಮೇಲೆ ಹಲ್ಲೆ ನಡೆಸಿರುವ ಘಟನೆ ಒಡಿಶಾದ ಜಾಜ್ ಪುರದಲ್ಲಿ ನಡೆದಿದೆ.

ಓದು ಬರಹ ಕಲಿತು ಎಂಜಿನಿಯರಿಂಗ್ ವ್ಯಾಸಂಗ ಮಾಡಿ ಒಳ್ಳೆಯ ನೌಕರಿಯಲ್ಲಿರುವ 25ರ ಹರೆಯದ ಯುವಕನೋರ್ವ ವಾಮಾಚಾರದಲ್ಲಿ ನಂಬಿಕೆ ಇರಿಸಿರುವ ಸಂಗತಿ ಅಚ್ಚರಿ ಮೂಡಿಸುತ್ತದೆ. ಸುಧಾಂಶು ಮೊಹಾಂತ ಎಂಬಾತನೇ ದಾಳಿ ನಡೆಸಿದಾತ. ಇನ್ನು ಆತನಿಂದ ಹಲ್ಲೆಗೊಳಗಾದ ವ್ಯಕ್ತಿ 63ರ ಹರೆಯದ ನಾರಾಯಣ್ ಮೊಹಾಂತ, ಚಟಿಕಿಪಸಿ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. 

ಆರೋಪಿ ಸುಧಾಂಶು ಕಳೆದ ಹಲವು ತಿಂಗಳುಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ. ಹೊಟ್ಟೆನೋವಿಗೆ ನಾರಾಯಣ್ ಎಂಬ ವ್ಯಕ್ತಿ ಮಾಡಿಸಿದ ವಾಮಾಚಾರವೇ ಕಾರಣ ಎಂದು ಆತ ನಂಬಿದ್ದ.

ಹಲ್ಲೆ ನಡೆದ ಸಂದರ್ಭ ಸಂತ್ರಸ್ತ ನಾರಾಯಣ್ ಹಳ್ಳಿ ಪಕ್ಕದ ಕಾಡಿನಲ್ಲಿ ಆಡುಗಳನ್ನು ಮೇಯಿಸುತ್ತಿದ್ದ. ಅಲ್ಲಿಗೆ ಬೈಕಿನಲ್ಲಿ ಬಂದ ಸುಧಾಂಶು ತನ್ನೊಡನೆ ಮಾರಕಾಯುಧವೊಂದನ್ನೂ ತಂದಿದ್ದ. ಬೈಕಿನಿಂದ ಇಳಿದವನೇ ಆಯುಧದಿಂದ ನಾರಾಯಣ್ ಮೇಲೆ ಏಕಾಏಕಿ ದಾಳಿ ನಡೆಸಿದ್ದ.

ದಾಳಿಯಲ್ಲಿ ನಾರಾಯಣ್ ಸತ್ತನೆಂದು ತಿಳಿದು ಆರೋಪಿ ಪರಾರಿಯಾಗಿದ್ದ. ನಂತರ ಪೊಲೀಸರು ಆತನ ಬೆನ್ನುಬಿದ್ದು ಹಿಡಿದು ಜೈಲಿಗೆ ಹಾಕಿದ್ದಾರೆ. ಹಲ್ಲೆಗೊಳಗಾದ ನಾರಾಯಣ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com