ನವದೆಹಲಿ: ಪ್ಯಾರಾಲಿಂಪಿಕ್ಸ್ ನಲ್ಲಿ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕಾಗಿ 19 ಪದಕಗಳನ್ನು ಗೆದ್ದ ಭಾರತೀಯ ಆಟಗಾರರನ್ನು ಅಭಿನಂದಿಸಲು ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಇಂದು ಬೆಳಗಿನ ಉಪಾಹಾರ ಕೂಟ ಆಯೋಜಿಸಲಾಗಿತ್ತು. ಈ ವೇಳೆ ನಮೋ ಆಟಗಾರರನ್ನು ಸನ್ಮಾನಿಸಿದರು.
ಭಾರತೀಯ ಪ್ಯಾರಾ-ಅಥ್ಲೀಟ್‌ಗಳು ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚು ಸೇರಿದಂತೆ ಸಾಟಿಯಿಲ್ಲದ 19 ಪದಕಗಳನ್ನು ಗೆದ್ದ ಒಂದು ಸಂವೇದನಾಶೀಲ ಅಭಿಯಾನದ ಹಿನ್ನಲೆಯಲ್ಲಿ ಟೋಕಿಯೊದಿಂದ ಮರಳಿದ ಅವರಿಗೆ ಪ್ರಧಾನಿ ಮೋದಿ ಅಭಿನಂದಿಸಿದರು. ಈ ವೇಳೆ ಆಟಗಾರರ ಹಸ್ತಾಕ್ಷರದ ಶಾಲುವನ್ನು ಉಡುಗೊರೆಯಾಗಿ ನೀಡಿದ್ದು ಇದನ್ನು ಮೋದಿ ಅವರು ತಮ್ಮ ಕುತ್ತಿಗೆಗೆ ಧರಿಸಿದರು.
ಇತಿಹಾಸದಲ್ಲೇ ಇದು ದೇಶದ ಅತ್ಯುತ್ತಮ ಪ್ಯಾರಾಲಿಂಪಿಕ್ಸ್ ಅಭಿಯಾನವಾಗಿದ್ದು, ಒಟ್ಟಾರೆ ಪದಕ ಪಡೆದ ಸಂಖ್ಯೆಯಲ್ಲಿ 24ನೇ ಸ್ಥಾನದಲ್ಲಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಪಾದಾರ್ಪಣೆ ಮಾಡಿದ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾರತೀಯ ಶಟ್ಲರ್‌ಗಳು ಎರಡು ಚಿನ್ನ ಸೇರಿದಂತೆ ನಾಲ್ಕು ಪದಕಗಳನ್ನು ಗೆದ್ದಿದ್ದಾರೆ.
ಟೋಕಿಯೊ ಕ್ರೀಡಾಕೂಟದಲ್ಲಿ ಅವನಿ ಲೇಖರ ಮತ್ತು ಸಿಂಗರಾಜ್ ಅದಾನ ಇಬ್ಬರೂ ತಲಾ ಎರಡು ಪದಕಗಳನ್ನು ಗೆದ್ದರು. ಅಪಘಾತದಿಂದಾಗಿ ಪಾರ್ಶ್ವವಾಯುವಿಗೆ ಒಳಗಾದ ಲೇಖಾರಾ ಕಂಚು ಹಾಗೂ ಚಿನ್ನ ಗೆಲ್ಲುವ ಮೂಲಕ ಒಂದೇ ಕ್ರೀಡಾಕೂಟದಲ್ಲಿ ಎರಡು ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಇತಿಹಾಸ ಬರೆದರು.
ಪೋಲಿಯೊ ಪೀಡಿತ 39 ವರ್ಷದ ಅದಾನಾ ಅವರು ಸಹ ಕ್ರೀಡಾಕೂಟದಲ್ಲಿ ಬೆಳ್ಳಿ ಮತ್ತು ಕಂಚು ಪದಕ ಗೆದ್ದಿದ್ದಾರೆ.
2016ರ ರಿಯೋ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಹಿರಿಯ ಜಾವೆಲಿನ್ ಎಸೆತಗಾರ ದೇವೇಂದ್ರ ಜಜಾರಿಯಾ ಮತ್ತು ಎತ್ತರ ಜಿಗಿತಗಾರ ಮರಿಯಪ್ಪನ್ ತಂಗವೇಲು ಅವರೊಂದಿಗೆ ಪ್ರಧಾನಿ ಸಂವಾದ ನಡೆಸಿದರು.
ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಮತ್ತು ಬೆಳ್ಳಿ ಗೆದ್ದವರು ಮತ್ತು ಕಂಚಿನ ಪದಕ ವಿಜೇತೆ ಹರ್ವೀಂದರ್ ಸಿಂಗ್ ಕೂಡ ಇದ್ದರು.
Advertisement