
ನೈನಿತಾಲ್: ಉತ್ತರಾಖಂಡ ಹೈಕೋರ್ಟ್ ಗುರುವಾರ ಚಾರ್ಧಾಮ್ ಯಾತ್ರೆಯ ಮೇಲಿನ ತನ್ನ ತಡೆಯಾಜ್ಞೆಯನ್ನು ತೆರವುಗೊಳಿಸಿದ್ದು, ಕೋವಿಡ್ -19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಯಾತ್ರೆ ನಡೆಸಬಹುದು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಯಾತ್ರೆಯ ಮೇಲಿನ ನಿಷೇಧವನ್ನು ತೆರವುಗೊಳಿಸಿದ ಮುಖ್ಯ ನ್ಯಾಯಮೂರ್ತಿ ಆರ್ ಎಸ್ ಚೌಹಾಣ್ ಮತ್ತು ನ್ಯಾಯಮೂರ್ತಿ ಅಲೋಕ್ ಕುಮಾರ್ ವರ್ಮಾ ಅವರನ್ನೊಳಗೊಂಡ ವಿಭಾಗೀಯ ಪೀಠ, ದೇವಾಲಯಗಳಿಗೆ ಭೇಟಿ ನೀಡುವ ದೈನಂದಿನ ಭಕ್ತರ ಸಂಖ್ಯೆಗೆ ಮಿತಿ ಇರಬೇಕು ಮತ್ತು ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಹೇಳಿದೆ.
ಯಾತ್ರೆಗೆ ಬರುವ ಭಕ್ತರು ಕೋವಿಡ್ ನೆಗಟಿವ್ ವರದಿ ಮತ್ತು ಎರಡೂ ಡೋಸ್ ಲಸಿಕೆ ಪಡೆದ ಪ್ರಮಾಣಪತ್ರ ಹೊಂದುವುದು ಕಡ್ಡಾಯ ಎಂದು ನ್ಯಾಯಾಲಯ ಹೇಳಿದೆ.
ಚಾರ್ಧಮ್ ಎಂದು ಕರೆಯಲ್ಪಡುವ ಪ್ರಸಿದ್ಧ ಹಿಮಾಲಯನ್ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರ ದೈನಂದಿನ ಸಂಖ್ಯೆಗೆ ಮಿತಿ ವಿಧಿಸಿರುವ ಹೈಕೋರ್ಟ್ ಕೇದಾರನಾಥ ಧಾಮದಲ್ಲಿ 800, ಬದರಿನಾಥ ಧಾಮದಲ್ಲಿ 1200, ಗಂಗೋತ್ರಿಯಲ್ಲಿ 600 ಮತ್ತು ಯಮುನೋತ್ರಿಯಲ್ಲಿ 400 ಯಾತ್ರಾರ್ಥಿಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದೆ.
ಯಾತ್ರಾರ್ಥಿಗಳು ದೇವಾಲಯಗಳ ಸುತ್ತಲಿನ ಯಾವುದೇ ಕೊಳದಲ್ಲಿ ಸ್ನಾನ ಮಾಡಲು ಅನುಮತಿಸಲಾಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.
Advertisement