ಲಡಾಖ್ ಲಡಾಯಿ ನಡುವೆಯೇ ಉತ್ತರಾಖಂಡ್ ನ ಬರಹೋತಿ ಸೆಕ್ಟರ್ ನಲ್ಲಿ ಚೀನಾ ಅತಿಕ್ರಮ ಪ್ರವೇಶ, ವಾಪಸ್
ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ)ಯ 100 ಕ್ಕೂ ಹೆಚ್ಚು ಸೈನಿಕರು ಉತ್ತರಾಖಂಡ್ ನ ಬರಹೋತಿ ಸೆಕ್ಟರ್ ನಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದು ಕೆಲವು ಗಂಟೆಗಳ ನಂತರ ವಾಪಸ್ಸಾಗಿದ್ದಾರೆ.
ಘಟನೆ ಬಗ್ಗೆ ಅರಿವಿರುವವರು ಈ ಬಗ್ಗೆ ಮಾಹಿತಿ ನೀಡಿದ್ದು ಆ.30 ರಂದು ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಇಂಡೋ-ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.
ಭಾರತೀಯ ಪಡೆ ಈ ಬೆಳವಣಿಗೆ ಬಳಿಕ ಆ ಪ್ರದೇಶದಲ್ಲಿ ಗಸ್ತು ತಿರುಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ ಈ ವರೆಗೂ ಚೀನಾದ ಅತಿಕ್ರಮಣದ ವಿಷಯವಾಗಿ ಅಧಿಕೃತ ಹೇಳಿಕೆ, ಪ್ರತಿಕ್ರಿಯೆ ಬಿಡುಗಡೆಯಾಗಿಲ್ಲ.
ಈಶಾನ್ಯ ಲಡಾಖ್ ನಲ್ಲಿ ಉಭಯ ಪಕ್ಷಗಳೂ ಎರಡು ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳುವ ಕೆಲಸವನ್ನು ಪೂರ್ಣಗೊಳಿಸಿದ್ದರೂ ಈಶಾನ್ಯ ಲಡಾಖ ನಲ್ಲಿ ಘರ್ಷಣೆ ಮುಂದುವರೆದಿರುವುದರ ನಡುವೆಯೇ ಈ ಹೊಸ ಘಟನೆ ವರದಿಯಾಗಿದೆ.
ಉತ್ತರಾಖಂಡ್ ನಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿರುವ ಮಂದಿ, ಬರಹೋತಿ ಸೆಕ್ಟರ್ ನಲ್ಲಿ ಎರಡೂ ಕಡೆಗಳಲ್ಲಿ ಎಲ್ಎಸಿ ಕುರಿತು ಇರುವ ಭಿನ್ನ ಗ್ರಹಿಕೆಯಿಂದಾಗಿ ಈ ರೀತಿಯಾಗಿರಬಹುದು ಎಂದೂ ಹೇಳುತ್ತಿದ್ದಾರೆ.
ಆ.30 ರಂದು ಆ ಪರಿಪ್ರಮಾಣದಲ್ಲಿ (100 ಕ್ಕೂ ಹೆಚ್ಚಿನ ಮಂದಿ ಚೀನಾ ಸೈನಿಕರು) ಗಡಿ ಉಲ್ಲಂಹನೆ ಮಾಡಿ ಅತಿಕ್ರಮಣ ಮಾಡಿದ್ದು ಭಾರತದ ಅಧಿಕಾರಿಗಳ ಅಚ್ಚರಿಗೆ ಕಾರಣವಾಗಿದೆ.
ಚೀನಾ ಎಲ್ಎಸಿಯ ಸೆಕ್ಟರ್ ನಾದ್ಯಂತ ಗಣನೀಯವಾಗಿ ತನ್ನ ಮೂಲಸೌಕರ್ಯ ಅಭಿವೃದ್ಧಿಯನ್ನು ಮಾಡುತ್ತಿದೆ. ಇತ್ತ ಭಾರತ ಈಶಾನ್ಯ ಲಡಾಖ್ ಪ್ರಾಂತ್ಯದಲ್ಲಿ ಎಲ್ಎಸಿಯ 3,500 ಕಿ.ಮೀ ನಾದ್ಯಂತ ಕಟ್ಟುನಿಟ್ಟಿನ ಎಚ್ಚರಿಕೆ ವಹಿಸಿದೆ.

