ರಾಮ ಜನ್ಮಭೂಮಿ ವಿವಾದ ಇತ್ಯರ್ಥ ಸಮಿತಿಯಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಟ ಶಾರುಖ್ ಖಾನ್ ಗೂ ಆಹ್ವಾನವಿತ್ತಂತೆ!
2019ರಲ್ಲಿ ದಶಕಗಳ ಹಳೆಯ ರಾಮ ಜನ್ಮಭೂಮಿ ವಿವಾದಕ್ಕೆ ತೆರೆ ಬಿದ್ದಿತ್ತು. ಈ ಸಂಬಂಧ ವಿವಾದ ಇತ್ಯರ್ಥ ಮಾಡಲು ರಚಿಸಲಾಗಿದ್ದ ಮಧ್ಯಸ್ಥಿಕೆ ಸಮಿತಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಸೇರಿಸಿಕೊಳ್ಳುವ ಆಲೋಚನೆ ಸುಪ್ರೀಂ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಅವರಿಗಿತ್ತು ಎಂಬ ಮಾಹಿತಿ ಬಹಿರಂಗಗೊಂಡಿದೆ.
Published: 23rd April 2021 11:24 PM | Last Updated: 23rd April 2021 11:24 PM | A+A A-

ಶಾರುಖ್ ಖಾನ್
ನವದೆಹಲಿ: 2019ರಲ್ಲಿ ದಶಕಗಳ ಹಳೆಯ ರಾಮ ಜನ್ಮಭೂಮಿ ವಿವಾದಕ್ಕೆ ತೆರೆ ಬಿದ್ದಿತ್ತು. ಈ ಸಂಬಂಧ ವಿವಾದ ಇತ್ಯರ್ಥ ಮಾಡಲು ರಚಿಸಲಾಗಿದ್ದ ಮಧ್ಯಸ್ಥಿಕೆ ಸಮಿತಿಯಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅವರನ್ನು ಸೇರಿಸಿಕೊಳ್ಳುವ ಆಲೋಚನೆ ಸುಪ್ರೀಂ ನ್ಯಾಯಮೂರ್ತಿ ಎಸ್ಎ ಬೋಬ್ಡೆ ಅವರಿಗಿತ್ತು ಎಂಬ ಮಾಹಿತಿ ಬಹಿರಂಗಗೊಂಡಿದೆ.
ಸುಪ್ರೀಂನ ನಿವೃತ್ತ ನ್ಯಾಯಮೂರ್ತಿ ರಂಜನ್ ಗೋಗಾಯ್ ಅವರ ನೇತೃತ್ವದಲ್ಲಿ ನಡೆದಿದ್ದ ರಾಮ ಜನ್ಮಭೂಮಿ ವಿವಾದ ಪ್ರಕರಣದ ಪಂಚ ಪೀಠದಲ್ಲಿ ಎಸ್ಎ ಬೋಬ್ಡೆ ಅವರು ಕೂಡ ಇದ್ದರು. ಈ ವೇಳೆ ವಿವಾದವನ್ನು ಶಾಂತಿಯೂತವಾಗಿ ಪರಿಹರಿಸುವ ಸಲುವಾಗಿ ಸುಪ್ರೀಂ ಕೋರ್ಟ್ ಅಂದು ಮಧ್ಯಸ್ಥಿಕೆ ಸಮಿತಿಯನ್ನು ರಚಿಸಿತ್ತು.
ಇಂದು ಎಸ್ಎ ಬೋಬ್ಡೆ ಅವರು ಸುಪ್ರೀಂ ನ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿ ಹೊಂದಿದ್ದು ಈ ವಿದಾಯ ಸಮಾರಂಭದಲ್ಲಿ ಸುಪ್ರೀಂ ಕೋರ್ಟ್ ನ ಬಾರ್ ಅಸೋಸಿಯೇಷನ್ ಮುಖ್ಯಸ್ಥ ವಿಕಾಸ್ ಸಿಂಗ್ ಈ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.
ಬೋಬ್ಡೆ ಅವರ ಸೂಚನೆಯಂತೆ ಮಧ್ಯಸ್ಥಿಕೆ ಸಮಿತಿಯಲ್ಲಿ ಪಾಲ್ಗೊಳ್ಳುವಂತೆ ಶಾರುಖ್ ಖಾನ್ ನನ್ನು ಕೇಳಲಾಗಿತ್ತು. ಇದಕ್ಕೆ ನಟ ಸಹ ಓಕೆ ಅಂದಿದ್ದರೂ ಆದರೆ ಕೊನೆಯ ಕ್ಷಣದಲ್ಲಿ ಇದು ನೆರವೇರಲಿಲ್ಲ ಎಂದು ವಿಕಾಸ್ ತಿಳಿಸಿದ್ದಾರೆ.
ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ, ಎಫ್ಎಂಐ ಕಲಿಫುಲ್ಲಾ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಾಂಚು ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಈ ಮಧ್ಯಸ್ಥಿಕೆ ಸಮಿತಿ ಯಶಸ್ವಿಯಾಗದ ಕಾರಣ ಸುಪ್ರೀಂ ತಾನ್ ಪ್ರಕರಣವನ್ನು ಕೈಗೆತ್ತಿಕೊಂಡು ತೀರ್ಪು ನೀಡಿತ್ತು.