ಪಶ್ಚಿಮ ಬಂಗಾಳ ಚುನಾವಣೆ: ಏಳನೇ ಹಂತದ ಮತದಾನ ಪ್ರಗತಿಯಲ್ಲಿ, ಸಿಎಂ ತವರು ಕ್ಷೇತ್ರ ಭಬಾನಿಪುರ ಮೇಲೆ ಎಲ್ಲರ ಚಿತ್ತ 

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಏಳನೇ ಹಂತದ ಮತದಾನ ಸೋಮವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಇಂದು 34 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 284 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಪಶ್ಚಿಮ ಬಂಗಾಳದ 34 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಗತಿಯಲ್ಲಿ
ಪಶ್ಚಿಮ ಬಂಗಾಳದ 34 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಗತಿಯಲ್ಲಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಏಳನೇ ಹಂತದ ಮತದಾನ ಸೋಮವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. ಇಂದು 34 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, 284 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಅದರಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತವರು ಕ್ಷೇತ್ರ ಭಬಾನಿಪುರ ಪ್ರಮುಖವಾದುದು. 

86 ಲಕ್ಷಕ್ಕೂ ಅಧಿಕ ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಮುರ್ಶಿದಾಬಾದ್ ಮತ್ತು ಪಶ್ಚಿಮ್ ಬರ್ದಮಾನ್ ಜಿಲ್ಲೆಯ 9 ಕ್ಷೇತ್ರಗಳು, ದಕ್ಷಿಣ್ ದಿನಜ್ ಪುರ್ ಮತ್ತು ಮಲ್ದಗಳಲ್ಲಿ ತಲಾ 6 ವಿಧಾನಸಭಾ ಕ್ಷೇತ್ರಗಳು ಹಾಗೂ ಕೋಲ್ಕತ್ತಾದ ನಾಲ್ಕು ಕ್ಷೇತ್ರಗಳಲ್ಲಿ ಇಂದು ಮತದಾನ ನಡೆಯುತ್ತಿದೆ.

ಎಲ್ಲರ ಚಿತ್ತ ಇಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ತವರು ಕ್ಷೇತ್ರ ಭಬಾನಿಪುರ ಮೇಲೆ ನೆಟ್ಟಿದೆ. ಟಿಎಂಸಿಯ ಹಿರಿಯ ನಾಯಕ ಮತ್ತು ರಾಜ್ಯ ಇಂಧನ ಖಾತೆ ಸಚಿವ ಸೊಬಂದೆಬ್ ಚಟ್ಟೋಪಾಧ್ಯಾಯ ಭಬಾನಿಪುರ ಕ್ಷೇತ್ರದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಇತ್ತೀಚೆಗೆ ಆಡಳಿತಾರೂಢ ಟಿಎಂಸಿ ತೊರೆದು ಬಿಜೆಪಿ ಸೇರಿರುವ ನಟ ರುದ್ರನಿಲ್ ಘೋಷ್,  ಚಟ್ಟೋಪಾಧ್ಯಾಯ ವಿರುದ್ಧ ಪ್ರಮುಖ ಸ್ಪರ್ಧಿಯಾಗಿದ್ದಾರೆ. 

ಹಿಂಸಾಚಾರ, ಗಲಭೆಗೆ ಈ ಹಿಂದಿನ ಸುತ್ತಿನ ಮತದಾನ ವೇಳೆ ಸಾಕ್ಷಿಯಾಗಿರುವ ಪಶ್ಚಿಮ ಬಂಗಾಳದಲ್ಲಿ ಇಂದು ಭದ್ರತೆಗೆ 796 ಕೇಂದ್ರ ಭದ್ರತಾ ಪಡೆ ತುಕಡಿಯನ್ನು ನಿಯೋಜಿಸಲಾಗಿದೆ. ಮತದಾನ ವೇಳೆ ಕೋವಿಡ್-19 ಮಾರ್ಗಸೂಚಿ ನಿಯಮಗಳನ್ನು ಪಾಲಿಸಲಾಗುತ್ತಿದೆ. ಚುನಾವಣಾ ಫಲಿತಾಂಶ ಮೇ 2ರಂದು ಪ್ರಕಟವಾಗಲಿದೆ.

ಪ್ರಧಾನಿ ಕರೆ: ಇಂದು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ 7ನೇ ಹಂತದ ಮತದಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಕೋವಿಡ್ ಶಿಷ್ಟಾಚಾರಗಳೊಂದಿಗೆ ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com