ಧನ್ಬಾದ್ ನ್ಯಾಯಾಧೀಶರ ಸಾವು ಪ್ರಕರಣ: ಪಠಾರ್ಡಿಹ್ ಪೊಲೀಸ್ ಠಾಣೆಯ ಇನ್-ಚಾರ್ಜ್ ಅಮಾನತು
ಧನ್ಬಾದ್ ಹಿಟ್& ರನ್ ಘಟನೆಯಲ್ಲಿ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಸಾವಿಗೀಡಾಗಿದ್ದ ಪ್ರಕರಣದಲ್ಲಿ ಪಠಾರ್ಡಿಹ್ ಪೊಲೀಸ್ ಠಾಣೆಯ ಇನ್ ಚಾರ್ಜ್ ಪೊಲೀಸ್ ಅಧಿಕಾರಿ ಉಮೇಶ್ ಮಾಂಝಿ ಅವರನ್ನು ಅಮಾನತುಗೊಳಿಸಲಾಗಿದೆ.
Published: 01st August 2021 05:07 PM | Last Updated: 01st August 2021 05:07 PM | A+A A-

ಅಮಾನತು (ಸಾಂಕೇತಿಕ ಚಿತ್ರ)
ರಾಂಚಿ: ಧನ್ಬಾದ್ ಹಿಟ್& ರನ್ ಘಟನೆಯಲ್ಲಿ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಸಾವಿಗೀಡಾಗಿದ್ದ ಪ್ರಕರಣದಲ್ಲಿ ಪಠಾರ್ಡಿಹ್ ಪೊಲೀಸ್ ಠಾಣೆಯ ಇನ್ ಚಾರ್ಜ್ ಪೊಲೀಸ್ ಅಧಿಕಾರಿ ಉಮೇಶ್ ಮಾಂಝಿ ಅವರನ್ನು ಅಮಾನತುಗೊಳಿಸಲಾಗಿದೆ.
ಸೆಷನ್ಸ್ ನ್ಯಾಯಾಧೀಶರಾಗಿದ್ದ ಉತ್ತಮ್ ಆನಂದ್ ಅವರು ಕಳೆದ ವಾರ ಬೆಳಿಗ್ಗೆ ವಾಕಿಂಗ್ ಮಾಡುತ್ತಿರಬೇಕಾದರೆ ಕಳುವಾಗಿದ್ದ ಆಟೋ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿದ್ದರು.
ಶುಕ್ರವಾರದಂದು ಬೆಳಿಗ್ಗೆ ಆಟೋ ಕಳುವಾಗಿರುವ ಸಂಬಂಧ ದೂರು ನೀಡಲಾಗಿದ್ದರೂ ತಕ್ಷಣ ಕ್ರಮ ಜರುಗಿಸದೇ ಕರ್ತವ್ಯಲೋಪ ಎಸಗಿದ ಅಧಿಕಾರಿ ಮಾಂಝಿ ಅವರನ್ನು ಎಸ್ಎಸ್ ಪಿ ಸಂಜೀವ್ ಕುಮಾರ್ ಅಮಾನತುಗೊಳಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರೂ ಆರೋಪಿಗಳು ಪಠಾರ್ಡಿಹ್ ಪೊಲೀಸ್ ಠಾಣೆಯ ವ್ಯಾಪ್ತಿಯವರೇ ಆಗಿದ್ದಾರೆ. ನ್ಯಾಯಾಧೀಶರಿಗೆ ಡಿಕ್ಕಿ ಹೊಡೆದ ಆಟೋವನ್ನೂ ಇದೇ ಪ್ರದೇಶದಿಂದ ವಶಕ್ಕೆ ಪಡೆಯಲಾಗಿದೆ.
ಆಟೋ ಕಳುವು ಪ್ರಕರಣವನ್ನು ವಾಹನದ ಮಾಲಿಕರಾಗಿದ್ದ ಸುಂಗಿ ದೇವಿ ದಾಖಲಿಸಿದ್ದರು. ಆದರೆ ಈಕೆಯ ಪತಿ-ಈಗಾಗಲೇ ಅಪರಾಧ ಹಾಗೂ ಪೊಲೀಸ್ ವಿಚಾರಣೆಯ ಹಿನ್ನೆಲೆ ಇರುವ ರಾಮ್ ದೇವ್ ಲೋಹ್ರಾ ಅವರನ್ನು ಬಂಧಿಸಲಾಗಿದೆ.
ಸಿಸಿಟಿವಿ ಫುಟೇಜ್ ನಲ್ಲಿ ಉತ್ತಮ್ ಆನಂದ್ ಅವರಿಗೆ ಉದ್ದೇಶಪೂರ್ವಕವಾಗಿ ಅಪಘಾತ ಮಾಡಿಸಲಾಗಿರುವುದು ಸ್ಪಷ್ಟವಾಗಿದ್ದು, ಹಲವು ಅನುಮಾನಗಳನ್ನು ಮೂಡಿಸಿತ್ತು. ಗಾಲ್ಫ್ ಗ್ರೌಂಡ್ಸ್ ನಲ್ಲಿರುವ ಉತ್ತಮ್ ಆನಂದ್ ಅವರ ನಿವಾಸಕ್ಕೆ 500 ಮೀಟರ್ ಗಳ ದೂರದಲ್ಲಿ ಈ ಘಟನೆ ಸಂಭವಿಸಿತ್ತು.