ಜಮ್ಮು-ಕಾಶ್ಮೀರ ಕುರಿತ ಹೇಳಿಕೆ: ನವಜೋತ್ ಸಿಂಗ್ ಸಿಧು ಸಲಹೆಗಾರ ಹುದ್ದೆ ತೊರೆದ ಮಾಲಿ
ಜಮ್ಮು- ಕಾಶ್ಮೀರ ಕುರಿತ ವಿವಾದಾತ್ಮಕ ಹೇಳಿಕೆಯಿಂದಾಗಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಲಹೆಗಾರ ಮಾಲ್ವಿಂದರ್ ಸಿಂಗ್ ಮಾಲಿ ತಮ್ಮ ಸ್ಥಾನವನ್ನು ತೊರೆದಿದ್ದಾರೆ.
Published: 27th August 2021 03:05 PM | Last Updated: 27th August 2021 03:05 PM | A+A A-

ನವಜೋತ್ ಸಿಂಗ್ ಸಿಧು
ನವದೆಹಲಿ: ಜಮ್ಮು- ಕಾಶ್ಮೀರ ಕುರಿತ ವಿವಾದಾತ್ಮಕ ಹೇಳಿಕೆಯಿಂದಾಗಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಸಲಹೆಗಾರ ಮಾಲ್ವಿಂದರ್ ಸಿಂಗ್ ಮಾಲಿ ತಮ್ಮ ಸ್ಥಾನವನ್ನು ತೊರೆದಿದ್ದಾರೆ. ಆದಾಗ್ಯೂ, ಇದನ್ನು ರಾಜೀನಾಮೆ ಎಂದು ಮಾಲಿ ಕರೆದಿಲ್ಲ. ಯಾವುದೇ ಹುದ್ದೆ ಪಡೆಯುವುದಾಗಲೀ ಅಥವಾ ಯಾವುದೇ ಹುದ್ದೆಗೆ ರಾಜೀನಾಮೆ ನೀಡುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಅವರು ಫೇಸ್ ಬುಕ್ ನಲ್ಲಿ ಫೋಸ್ಟ್ ಮಾಡಿದ್ದಾರೆ.
ಜಮ್ಮು ಕಾಶ್ಮೀರ ಮತ್ತು ಪಾಕಿಸ್ತಾನದಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ಇತ್ತೀಚಿಗೆ ಕೆಟ್ಟದಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ತಮ್ಮ ಇಬ್ಬರು ಸಲಹೆಗಾರರನ್ನು ಹದ್ದುಬಸ್ತಿನಲ್ಲಿಡುವಂತೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ನವಜೋತ್ ಸಿಂಗ್ ಸಿಧುಗೆ ಸಲಹೆ ನೀಡಿದ್ದರು. ಇವರಿಬ್ಬರನ್ನು ಸಲಹೆಗಾರರನ್ನು ತೆಗೆದುಹಾಕುವಂತೆ ಪಂಜಾಬ್ ಎಐಸಿಸಿ ಉಸ್ತುವಾರಿ ಹರೀಶ್ ರಾವತ್ ಕೂಡಾ ಒತ್ತಾಯಿಸಿದ್ದರು.
ರಾಜಕೀಯ ವಿಶ್ಲೇಷಕ ಮಾಲಿ ಮತ್ತು ಬಾಬಾ ಪರೀದ್ ಆರೋಗ್ಯ ವಿಜ್ಞಾನ ವಿವಿ ಮಾಜಿ ರಿಜಿಸ್ಟ್ರರ್ ಪ್ಯಾರೆ ಲಾಲ್ ಗಾರ್ಗ್ ಅವರನ್ನು ಸಲಹೆಗಾರರಾಗಿ ಆಗಸ್ಟ್ 11 ರಂದು ಸಿಧು ನೇಮಕ ಮಾಡಿಕೊಂಡಿದ್ದರು. ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಫೋಸ್ಟ್ ವೊಂದನ್ನು ಹಾಕಿದ್ದ ಮಾಲಿ, ಕಾಶ್ಮೀರ ಭಾರತದ ಭಾಗವಾದರೆ ಸಂವಿಧಾನದ 370 ಮತ್ತು 35 ಎ ಅಗತ್ಯವೇನಿತ್ತು ಎಂದು ಹೇಳಿದ ಬಗ್ಗೆ ವರದಿಯಾಗಿತ್ತು. ಅಲ್ಲದೇ ಕಾಶ್ಮೀರ ಕಾಶ್ನೀರಿ ಜನರ ದೇಶ ಎಂದಿದ್ದರು.
ಮತ್ತೊಬ್ಬ ಸಲಹೆಗಾರ ಗಾರ್ಗ್, ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಪಾಕಿಸ್ತಾನ ಕುರಿತು ಟೀಕಿಸುವುದನ್ನು ಪ್ರಶ್ನಿಸಿದ್ದರು. ಇಂತಹ ಕೆಟ್ಟ ಹೇಳಿಕೆಗಳು ರಾಜ್ಯ ಹಾಗೂ ದೇಶದ ಶಾಂತಿ ಮತ್ತು ಭದ್ರತೆಗೆ ಅಪಾಯಕಾರಿ ಎಂದು ಕ್ಯಾಪ್ಟನ್ ಅಮರೀಂದರ್ ಸಿಂಗ್ ಎಚ್ಚರಿಕೆ ನೀಡಿದ್ದರು.