ದೆಹಲಿ ವಾಯುಮಾಲಿನ್ಯ ನಿಯಂತ್ರಣದ ಸಲಹೆಗೆ 24 ಗಂಟೆ ಡೆಡ್ ಲೈನ್: ಕೇಂದ್ರ, ದೆಹಲಿ ಸರ್ಕಾರಕ್ಕೆ 'ಸುಪ್ರೀಂ' ಗಡುವು

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಮಾಲಿನ್ಯ ನಿಯಂತ್ರಣಕ್ಕೆ 24 ಗಂಟೆಗಳ ಒಳಗೆ ಸಲಹೆಗಳನ್ನು ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಮಾಲಿನ್ಯ ನಿಯಂತ್ರಣಕ್ಕೆ 24 ಗಂಟೆಗಳ ಒಳಗೆ ಸಲಹೆಗಳನ್ನು ನೀಡುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.

ಮಾಲಿನ್ಯ ಮಟ್ಟವನ್ನು ತಗ್ಗಿಸಲು ನೆಲಮಟ್ಟದಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಕೊನೆಗೆ 'ನಮ್ಮ ಹೆಗಲ ಮೇಲೆ ಬಂದೂಕು ಇಡುವಂತಿಲ್ಲ' ಎಂದು ಕೇಂದ್ರ ಮತ್ತು ದೆಹಲಿ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಹೇಳಿದೆ.

'ನಿಮ್ಮ ಅಧಿಕಾರಶಾಹಿಗೆ ನಾವು ಸೃಜನಶೀಲತೆಯನ್ನು ತರಲು ಸಾಧ್ಯವಿಲ್ಲ' ಎಂದು ಸುಪ್ರೀಂ ಕೋರ್ಟ್ ಹೇಳಿದ್ದು ಅಧಿಕಾರಿಗಳು ಮಾಲಿನ್ಯವನ್ನು ನಿಯಂತ್ರಿಸಲು ವಿಫಲವಾದರೆ, ಆಗ ಅಸಾಮಾನ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ಪೀಠವು ಮಾಲಿನ್ಯ ಮಟ್ಟವನ್ನು ತಗ್ಗಿಸಲು ನೆಲಮಟ್ಟದಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದರು.

ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ನಮಗೆ ಅನಿಸುತ್ತಿದೆ ಎಂದರು. ನಾವು ನಮ್ಮ ಸಮಯವನ್ನು ವ್ಯರ್ಥ ಮಾಡುತ್ತಿದ್ದೇವೆ ಎಂದು ನಾವು ಭಾವಿಸುತ್ತೇವೆ. ನಾವು ನಿಮಗೆ 24 ಗಂಟೆಗಳ ಕಾಲ ನೀಡುತ್ತಿದ್ದೇವೆ. ನೀವು ಈ ಸಮಸ್ಯೆಯ ಬಗ್ಗೆ ಆಳವಾಗಿ ಯೋಚಿಸಬೇಕು ಮತ್ತು ಗಂಭೀರವಾಗಿ ಪರಿಹಾರವನ್ನು ಕಂಡುಕೊಳ್ಳಬೇಕೆಂದು ನಾವು ಬಯಸುತ್ತೇವೆ ಕೋರ್ಟ್ ಅಭಿಪ್ರಾಯಪಟ್ಟಿದೆ.

ನ್ಯಾಯಾಲಯದ ಕಳವಳಗಳನ್ನು ಪರಿಹರಿಸುವ ಕ್ರಮಗಳ ಬಗ್ಗೆ ಪೀಠಕ್ಕೆ ತಿಳಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇನ್ನೂ ಒಂದು ದಿನವನ್ನು ಕೋರಿದರು. ಇದಕ್ಕೆ ಪೀಠವು, 'ಮಿಸ್ಟರ್ ಮೆಹ್ತಾ, ನಾವು ನಿಮ್ಮಿಂದ ಗಂಭೀರ ಕ್ರಮವನ್ನು ನಿರೀಕ್ಷಿಸುತ್ತೇವೆ. ನಿಮಗೆ ಅದನ್ನು ತೆಗೆದುಕೊಳ್ಳಲು ಸಾಧ್ಯವಾಗದಿದ್ದರೆ, ನಾವು ತೆಗೆದುಕೊಳ್ಳುತ್ತೇವೆ, ನಾವು ನಿಮಗೆ 24 ಗಂಟೆಗಳ ಕಾಲಾವಕಾಶ ನೀಡುತ್ತಿದ್ದೇವೆ. ಸರ್ಕಾರಗಳು ನಮ್ಮ ಹೆಗಲ ಮೇಲೆ ಬಂದೂಕನಿಟ್ಟು ಗುಂಡು ಹಾರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಬದಲಿಗೆ, ಸಮಸ್ಯೆಯನ್ನು ಪರಿಹರಿಸಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಬೇಕು. ಮಾಲಿನ್ಯವನ್ನು ಪರಿಶೀಲಿಸಲು ಇದುವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ನ್ಯಾಯಾಲಯ ಅತೃಪ್ತಿ ವ್ಯಕ್ತಪಡಿಸಿದೆ. ಇನ್ನು ಶುಕ್ರವಾರ ಬೆಳಗ್ಗೆ 10 ಗಂಟೆಗೆ ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿದೆ.

ಇದಕ್ಕೂ ಮೊದಲು, 'ರೆಡ್ ಲೈಟ್ ಆನ್, ಗಾಡಿ ಆಫ್' ಅಭಿಯಾನದ ಬಗ್ಗೆ ನ್ಯಾಯಾಲಯವು ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಇದು ಜನಪರ ಘೋಷಣೆಯಲ್ಲದೆ ಬೇರೇನೂ ಅಲ್ಲ ಎಂದು ಹೇಳಿದೆ. ಆಮ್ ಆದ್ಮಿ ಪಕ್ಷ(ಎಎಪಿ) ಸರ್ಕಾರವು ಮನೆಯಿಂದ ಕೆಲಸ, ಲಾಕ್‌ಡೌನ್ ಅನುಷ್ಠಾನ ಮತ್ತು ಶಾಲಾ-ಕಾಲೇಜುಗಳ ಮುಚ್ಚುವಿಕೆಯಂತಹ ಕ್ರಮಗಳನ್ನು ಕೈಗೊಳ್ಳಲು ಕಳೆದ ವಿಚಾರಣೆಯಲ್ಲಿ ಭರವಸೆ ನೀಡಿತ್ತು. ಆದರೆ ಇದರ ಹೊರತಾಗಿಯೂ ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ ಮತ್ತು ವಯಸ್ಕರು ಕೆಲಸ ಮಾಡುತ್ತಿದ್ದಾರೆ ಎಂದು ಪೀಠ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com