ಮುಸ್ಲಿಮರು ಮಥುರಾದಲ್ಲಿನ ಮಸೀದಿಯನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು: ಉತ್ತರ ಪ್ರದೇಶದ ಸಚಿವ
ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಸಮೀಪವಿರುವ ಮಸೀದಿಯನ್ನು ಮುಸ್ಲಿಮರು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಉತ್ತರ ಪ್ರದೇಶದ ಸಚಿವ ಆನಂದ್ ಸ್ವರೂಪ್ ಶುಕ್ಲಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Published: 07th December 2021 05:31 PM | Last Updated: 07th December 2021 05:31 PM | A+A A-

ಆನಂದ್ ಸ್ವರೂಪ್ ಶುಕ್ಲಾ
ಬಲ್ಲಿಯಾ: ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನದ ಸಮೀಪವಿರುವ ಮಸೀದಿಯನ್ನು ಮುಸ್ಲಿಮರು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಉತ್ತರ ಪ್ರದೇಶದ ಸಚಿವ ಆನಂದ್ ಸ್ವರೂಪ್ ಶುಕ್ಲಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಅಯೋಧ್ಯೆ ವಿವಾದವನ್ನು ನ್ಯಾಯಾಲಯ ಬಗೆಹರಿಸಿತು. ವಾರಣಾಸಿ ಮತ್ತು ಮಥುರಾದಲ್ಲಿರುವ ಬಿಳಿ ಬಣ್ಣದ ಕಟ್ಟಡಗಳು (ಮಸೀದಿಗಳು) ಹಿಂದೂಗಳ ಮನಸ್ಸಿಗೆ ನೋವುಂಟು ಮಾಡುತ್ತಿವೆ. ನ್ಯಾಯಾಲಯದ ಸಹಕಾರದೊಂದಿಗೆ ಈ ಕಟ್ಟಡಗಳನ್ನು ತೆರವುಗೊಳಿಸುವ ಕಾಲ ಬರಲಿದೆ ಎಂದು ಉತ್ತರ ಪ್ರದೇಶ ಸಚಿವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ.
ರಾಮ ಮತ್ತು ಕೃಷ್ಣ ತಮ್ಮ ಪೂರ್ವಜರು, ಬಾಬರ್, ಅಕ್ಬರ್ ಮತ್ತು ಔರಂಗಜೇಬ್ ಆಕ್ರಮಣಕಾರರು ಎಂದು ಭಾರತದ ಮುಸ್ಲಿಮರು ನಂಬಬೇಕೆಂದು ರಾಮ್ ಮನೋಹರ್ ಲೋಹಿಯಾ ಅವರು ಹೇಳಿದ್ದರು. ಹೀಗಾಗಿ ಬಾಬರ್‌ರಂಥವರು ನಿರ್ಮಿಸಿದ ಯಾವುದೇ ಕಟ್ಟಡದೊಂದಿಗೆ ನಿಮ್ಮ ಸಂಬಂಧ ಬೇಡ ಎಂದು ಶುಕ್ಲಾ ಹೇಳಿದ್ದಾರೆ.
ಭಾರತದಲ್ಲಿರುವ ಎಲ್ಲಾ ಮುಸ್ಲಿಮರು ಮತಾಂತರಗೊಂಡವರು. 200-250 ವರ್ಷಗಳ ಇತಿಹಾಸವನ್ನು ಗಮನಿಸಿದರೆ, ಅವರೆಲ್ಲ ಹಿಂದೂ ಧರ್ಮದಿಂದ ಇಸ್ಲಾಂ ಧರ್ಮಕ್ಕೆ ಮತಾಂತರ ಆಗಿದ್ದಾರೆ. ಅವರೆಲ್ಲರೂ ಹಿಂದೂ ಧರ್ಮಕ್ಕೆ (ಘರ್ ವಾಪ್ಸಿ) ವಾಪಸ್ ಬರಬೇಕು ಎಂಬುದೇ ನಮ್ಮ ಆಶಯ ಎಂದು ಶುಕ್ಲಾ ತಿಳಿಸಿದ್ದಾರೆ.