ವಿಪಕ್ಷಗಳ ಸಂಸದರು ಕ್ಷಮೆ ಕೋರಿದಲ್ಲಿ ಅಮಾನತು ಆದೇಶ ವಾಪಸ್: ಪ್ರಹ್ಲಾದ್ ಜೋಶಿ
ರಾಜ್ಯಸಭೆಯಿಂದ ಅಮಾನತುಗೊಂಡಿರುವ ಸಂಸದರು ಕ್ಷಮೆ ಕೋರಿದಲ್ಲಿ ಅಮಾನತು ಆದೇಶವನ್ನು ಹಿಂಪಡೆಯಲಾಗುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
Published: 07th December 2021 02:50 PM | Last Updated: 07th December 2021 04:02 PM | A+A A-

ರಾಜ್ಯಸಭೆ ಕಲಾಪ
ನವದೆಹಲಿ: ರಾಜ್ಯಸಭೆಯಿಂದ ಅಮಾನತುಗೊಂಡಿರುವ ಸಂಸದರು ಕ್ಷಮೆ ಕೋರಿದಲ್ಲಿ ಅಮಾನತು ಆದೇಶವನ್ನು ಹಿಂಪಡೆಯಲಾಗುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಇಂದು ಪ್ರಧಾನಿ ನರಂದ್ರ ಮೋದಿ ಭಾಗವಹಿಸಿದ್ದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಸಚಿವರುಗಳು ಸಂಸದರ ಅಮಾನತು ಆದೇಶದ ಬಗ್ಗೆ ವಿವರಣೆ ನೀಡಿದ್ದಾರೆ ಎಂದೂ ಜೋಶಿ ತಿಳಿಸಿದ್ದಾರೆ.
ನಾವು ಸಂಸದರನ್ನು ಏಕೆ ಅಮಾನತು ಮಾಡಲಾಯಿತು ಎಂಬುದನ್ನು ವಿವರಿಸಿದ್ದೇವೆ. ಏನಾಯಿತು ಎಂಬುದನ್ನು ದೇಶವೇ ನೋಡಿದೆ. ದಾಖಲೆಗಳಲ್ಲಿದೆ. ಅವರು ಇಂದಿಗೂ ಕ್ಷಮೆ ಕೇಳಿದರೆ ನಾವು ಅಮಾನತು ಆದೇಶವನ್ನು ಹಿಂಪಡೆಯುವುದಕ್ಕೆ ಸಿದ್ಧರಿದ್ದೇವೆ ಎಂದು ಜೋಶಿ ಸಂಸದೀಯ ಮಂಡಳಿ ಸಭೆಯ ಬಳಿಕ ತಿಳಿಸಿದ್ದಾರೆ.
ಇದನ್ನೂ ಓದಿ: ನೀವಾಗೇ ಬದಲಾಗಿ ಅಥವಾ ಬದಲಾವಣೆಗಳನ್ನು ಎದುರಿಸಲು ಸಿದ್ಧರಾಗಿ: ಸಂಸದರಿಗೆ ಮೋದಿ ಎಚ್ಚರಿಕೆ!
ಮುಂಗಾರು ಅಧಿವೇಶನದ ಕೊನೆಯ ದಿನದಂದು ಸಂಸತ್ ನಲ್ಲಿ ತೀವ್ರ ಗದ್ದಲ ಉಂಟುಮಾಡಿದ್ದ ಕಾರಣ ವಿಪಕ್ಷಗಳ 12 ಸಂಸದರನ್ನು ಚಳಿಗಾಲದ ಉಳಿದ ಅಧಿವೇಶನದ ರಾಜ್ಯಸಭೆಯ ಕಲಾಪದಿಂದ ಅಮಾನತುಗೊಳಿಸಲಾಗಿತ್ತು. ಇದೇ ವೇಳೆ, ಬಿಜೆಪಿ ಸಂಸದೀಯ ಮಂಡಳಿ ಸಭೆಯ ಬಗ್ಗೆ ವಿವರ ನೀಡಿರುವ ಅವರು, ಪದ್ಮ ಪ್ರಶಸ್ತಿ ಪುರಸ್ಕೃತರನ್ನೊಳಗೊಂಡ ಕಾರ್ಯಕ್ರಮಗಳನ್ನು ಆಯೋಜಿಸುವುದಕ್ಕೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.