ಹೆಲಿಕಾಪ್ಟರ್ ಪತನ: ತೇಜಸ್ ಅಪಘಾತ ತಪ್ಪಿಸಿದ್ದಕ್ಕೆ ಆಗಸ್ಟ್ ನಲ್ಲಿ ಶೌರ್ಯ ಚಕ್ರ ಪ್ರಶಸ್ತಿ ಪಡೆದಿದ್ದ ಕ್ಯಾಪ್ಟನ್ ವರುಣ್ ಸಿಂಗ್‌!

ತಮಿಳುನಾಡಿನ ಕುನೂರ್ ಬಳಿ ನಿನ್ನೆ ಸಂಭವಿಸಿದ ಭಯಾನಕ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್, ಕಳೆದ ವರ್ಷ ಯುದ್ದ ವಿಮಾನ 'ತೇಜಸ್'  ಹಾರಾಟ ಸಂದರ್ಭದಲ್ಲಿ ದೊಡ್ಡ ತಾಂತ್ರಿಕ ದೋಷದಿಂದ ತೊಂದರೆಯಲ್ಲಿ ಸಿಲುಕಿದ್ದಾಗ ಸಂಭಾವ್ಯ ಅಪಘಾತವನ್ನು ತಪ್ಪಿಸಿದ್ದರು.
ವರುಣ್ ಸಿಂಗ್, ತೇಜಸ್ ಯುದ್ಧ ವಿಮಾನ
ವರುಣ್ ಸಿಂಗ್, ತೇಜಸ್ ಯುದ್ಧ ವಿಮಾನ

ನವದೆಹಲಿ: ತಮಿಳುನಾಡಿನ ಕುನೂರ್ ಬಳಿ ನಿನ್ನೆ ಸಂಭವಿಸಿದ ಭಯಾನಕ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್, ಕಳೆದ ವರ್ಷ ಯುದ್ದ ವಿಮಾನ 'ತೇಜಸ್'  ಹಾರಾಟ ಸಂದರ್ಭದಲ್ಲಿ ದೊಡ್ಡ ತಾಂತ್ರಿಕ ದೋಷದಿಂದ ತೊಂದರೆಯಲ್ಲಿ ಸಿಲುಕಿದ್ದಾಗ ಸಂಭಾವ್ಯ ಅಪಘಾತವನ್ನು ತಪ್ಪಿಸಿದ್ದರು.  ಅದಕ್ಕಾಗಿ ಅವರಿಗೆ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

ವರುಣ್ ಸಿಂಗ್ ಈಗ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಉನ್ನತ ಮಿಲಿಟರಿ ಅಧಿಕಾರಿಗಳನ್ನೊಳಗೊಂಡ  ಅತ್ಯಂತ ದೊಡ್ಡ ವಿಮಾನ ಅಪಘಾತಗಳಲ್ಲಿ ಒಂದಾದ ಎಂಐ-17ವಿ5 ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮದುಲಿಕಾ ರಾವತ್ ಹಾಗೂ 11 ಮಂದಿ ಶಸಸ್ತ್ರ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ವೆಲ್ಲಿಂಗ್ಟನ್ ಸೇನಾ ಆಸ್ಪತ್ರೆಯಲ್ಲಿ ಜೀವ ರಕ್ಷಕದಲ್ಲಿದ್ದು, ಅವರನ್ನು ಬದುಕುಳಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿಂದು ತಿಳಿಸಿದರು. 

ವೆಲ್ಲಿಂಗ್‌ಟನ್‌ನಲ್ಲಿರುವ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ಭೇಟಿ ನೀಡುತ್ತಿದ್ದ ಜನರಲ್ ರಾವತ್ ಅವರ  ಸಂಪರ್ಕ ಅಧಿಕಾರಿಯಾಗಿದ್ದ ಗ್ರೂಪ್ ಕ್ಯಾಪ್ಟನ್ ಸಿಂಗ್ ರಷ್ಯಾ ನಿರ್ಮಿತ ಹೆಲಿಕಾಪ್ಟರ್‌ನಲ್ಲಿದ್ದರು. ಪ್ರಸ್ತುತ ಪ್ರತಿಷ್ಠಿತ ಸಂಸ್ಥೆಯಲ್ಲಿ ಬೋಧಕರಾಗಿ ಅವರು ಸೇವೆ ಸಲ್ಲಿಸುತ್ತಿದ್ದರು. ಗ್ರೂಪ್ ಕ್ಯಾಪ್ಟನ್ ಸಿಂಗ್ ಅವರು ಸೂಲೂರ್ ವಾಯುನೆಲೆಯಲ್ಲಿ ಜನರಲ್ ರಾವತ್ ಅವರನ್ನು ಬರಮಾಡಿಕೊಂಡರು, ಅಲ್ಲಿಂದ  ವೆಲ್ಟಿಂಗ್ಟನ್ ಕಡೆಗೆ ಹೆಲಿಕಾಪ್ಟರ್ ನಲ್ಲಿ ತೆರಳುತ್ತಿದ್ದರು. ವರುಣ್ ಸಿಂಗ್ ಅವರ ತಂದೆ ನಿವೃತ್ತ ಕರ್ನಲ್ ಕೆ. ಪಿ. ಸಿಂಗ್ ಸೇನಾ ವಾಯು ರಕ್ಷಣಾ- ಎಎಡಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ತೇಜಸ್ ಯುದ್ಧ ವಿಮಾನ ಅಪಘಾತಕ್ಕೀಡಾಗಬೇಕಿದ್ದ ಕಠಿಣ ಸಂದರ್ಭದಲ್ಲಿ ಅನುಕರಣೀಯವಾದ ಶಾಂತತೆ ಹಾಗೂ ಕೌಶಲ್ಯ ಪ್ರದರ್ಶಿಸಿ ಅಪಘಾತದಿಂದ ಪಾರು ಮಾಡಿದ್ದರು. ಇದಕ್ಕಾಗಿ ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 

ಸಂಪೂರ್ಣ ನಿಯಂತ್ರಣ ಕಳೆದುಕೊಂಡಿದ್ದ ತೇಜಸ್ ಯುದ್ಧ ವಿಮಾನವನ್ನು ಅಸಾಧಾರಣ ಧೈರ್ಯ ಮತ್ತು ಕೌಶಲ್ಯದೊಂದಿಗೆ ನಿಯಂತ್ರಿಸಿ ಸುರಕ್ಷಿತವಾಗಿ ಲ್ಯಾಂಡ್ ಮಾಡುವ ಮೂಲಕ ನೂರಾರು ಕೋಟಿ ರೂಪಾಯಿ ಉಳಿಸಿದ್ದರು ಎಂದು ಅಧಿಕಾರಿಗಳು ಹೇಳುತ್ತಾರೆ. ಸಿಂಗ್ ಅವರ ಕುಟುಂಬ ಮೂಲತ: ಉತ್ತರ ಪ್ರದೇಶದ ಗಾಜಿಪುರದವರಾಗಿದ್ದು, ಪ್ರಸ್ತುತ ಭೂಪಾಲ್ ನಲ್ಲಿ ವಾಸವಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com