ಓಮೈಕ್ರಾನ್ ಆತಂಕ: ಮಧ್ಯ ಪ್ರದೇಶದಲ್ಲಿ ನೈಟ್ ಕರ್ಫ್ಯೂ ಜಾರಿ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ನಿರ್ಬಂಧ

ಕೋವಿಡ್ ಹೊಸ ರೂಪಾಂತರಿ ಓಮೈಕ್ರಾನ್ ದೇಶಾದ್ಯಂತ ಹೆಚ್ಚುತ್ತಿರುವ ಕಾರಣ ಮಧ್ಯಪ್ರದೇಶ ಸರ್ಕಾರವು ಗುರುವಾರದಿಂದ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ವಿಧಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್ ಹೊಸ ರೂಪಾಂತರಿ ಓಮೈಕ್ರಾನ್ ದೇಶಾದ್ಯಂತ ಹೆಚ್ಚುತ್ತಿರುವ ಕಾರಣ ಮಧ್ಯಪ್ರದೇಶ ಸರ್ಕಾರವು ಗುರುವಾರದಿಂದ ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ನೈಟ್ ಕರ್ಫ್ಯೂ ವಿಧಿಸಿದೆ ಮತ್ತು ಜನರು ಕೋವಿಡ್ -19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಿದೆ.

ಮಧ್ಯಪ್ರದೇಶದಲ್ಲಿ ಇಲ್ಲಿಯವರೆಗೆ ಓಮೈಕ್ರಾನ್ ಪ್ರಕರಣ ದಾಖಲಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಸಾಮಾಜಿಕ ಅಂತರ ಅನುಸರಿಸಲು, ಮಾಸ್ಕ್ ಗಳನ್ನು ಬಳಸಲು ಮತ್ತು ಕಿಕ್ಕಿರಿದ ಸ್ಥಳಗಳಲ್ಲಿ ಜನರು ಸೇರದಂತೆ ಕೇಂದ್ರದ ಮಾರ್ಗಸೂಚಿಗಳನ್ನು ಸಹ ಹೊರಡಿಸಿದೆ.

ಗುರುವಾರ ರಾತ್ರಿಯಿಂದ ಇಡೀ ರಾಜ್ಯದಲ್ಲಿ ರಾತ್ರಿ 11 ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ವಿಧಿಸಲು ನಿರ್ಧರಿಸಿದ್ದೇವೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಹೇಳಿದ್ದಾರೆ.

ಕರ್ನಾಟಕ
ಇನ್ನೂ ರಾಜ್ಯದಲ್ಲಿ ಹೆಚ್ಚುತ್ತಿರುವ ಓಮೈಕ್ರಾನ್ ಪ್ರಕರಣಗಳ ಹಿನ್ನೆಲೆಯಲ್ಲಿ ಹೊಸ ವರ್ಷದ ಸಾರ್ವಜನಿಕ ಆಚರಣೆಗಳ ಮೇಲೆ ಕರ್ನಾಟಕ ಸರ್ಕಾರ ನಿರ್ಬಂಧ ಹೇರಿದೆ. ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನಿರ್ಬಂಧಗಳು ಜಾರಿಯಲ್ಲಿರುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಿಸಿದ್ದಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯದಾದ್ಯಂತ ಯಾವುದೇ ಸ್ಥಳದಲ್ಲಿ ಸಾಮೂಹಿಕ ಸಭೆಗಳನ್ನು ನಿಷೇಧಿಸಲಾಗಿದೆ. ಪಬ್‍ಗಳು ಮತ್ತು ರೆಸ್ಟೋರೆಂಟ್‍ಗಳಲ್ಲಿ ಆಸನ ಸಾಮರ್ಥ್ಯವನ್ನು ಶೇ.50ಕ್ಕೆ ಇಳಿಸಲಾಗಿದೆ. ಪಬ್‍ಗಳು ಮತ್ತು ರೆಸ್ಟೋರೆಂಟ್‍ಗಳಲ್ಲಿನ ಸಿಬ್ಬಂದಿಗೆ ಎರಡು ಲಸಿಕೆ ಪಡೆದಿರಬೇಕೆಂದು ಹೇಳಿದೆ.

ಮಹಾರಾಷ್ಟ್ರ
ಕ್ರಿಸ್ಮಸ್ ಆಚರಣೆಗಳನ್ನು ನಿರ್ಬಂಧಿಸುವ ಮಾರ್ಗಸೂಚಿಗಳನ್ನು ಮಹಾರಾಷ್ಟ್ರ ಸರ್ಕಾರ ಗುರುವಾರ ಹೊರಡಿಸಿದೆ. ಮಾರ್ಗಸೂಚಿಗಳು ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸಿ ಕ್ರಿಸ್‍ಮಸ್ ಅನ್ನು ಸರಳ ಆಚರಣೆ ಕಡ್ಡಾಯಗೊಳಿಸಿದೆ ಮತ್ತು ಧಾರ್ಮಿಕ ಸ್ಥಳಗಳೊಳಗೆ ಮತ್ತು ಹೊರಗೆ ಜನಸಂದಣಿಯನ್ನು ತಪ್ಪಿಸುವಂತೆ ನಾಗರಿಕರಿಗೆ ಸೂಚಿಸಲಾಗಿದೆ. 

ಡಿಸೆಂಬರ್ 24-25ರ ಮಧ್ಯರಾತ್ರಿ ಸಾಮೂಹಿಕ ಪ್ರಾರ್ಥನೆಗೆ ಶೇಕಡಾ 50 ರಷ್ಟು ಮಂದಿಗೆ ಮಾತ್ರ ಅನುಮತಿ ನೀಡಬಹುದು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com