'ಯೋಗಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸಿ ರಾಮನಾಮ ಜಪಿಸುತ್ತಾರೆ'
ಶಾಮ್ಲಿ: ಉತ್ತರ ಪ್ರದೇಶದಲ್ಲಿ ಮುಂದಿನ ಅವಧಿಗೆ ಕೂಡ ಯೋಗಿ ಆದಿತ್ಯನಾಥ್ ಸರ್ಕಾರ ಅಧಿಕಾರಕ್ಕೆ ಬಂದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಜನಿವಾರ ಧರಿಸಿ ಶ್ರೀರಾಮನಾಮ ಜಪ ಪ್ರಾರಂಭ ಮಾಡುತ್ತಾರೆ ಎಂದು ಉತ್ತರ ಪ್ರದೇಶದ ಪಂಚಾಯಿತಿ ರಾಜ್ ಸಚಿವ ಭೂಪೇಂದ್ರ ಸಿಂಗ್ ಚೌಧರಿ ಹೇಳಿದ್ದಾರೆ.
ರಾಹುಲ್ ಗಾಂಧಿ ಜನಿವಾರ ಧರಿಸಿದ್ದು, ಅಖಿಲೇಶ್ ಯಾದವ್ ಹನುಮಾನ್ ದೇಗುಲಕ್ಕೆ ಭೇಟಿ ಕೊಟ್ಟ ಘಟನೆಗಳ ಸಾಲಿಗೆ, ಓವೈಸಿ ಜನಿವಾರ ಧರಿಸಿ, ರಾಮನಾಮ ಜಪಿಸುವುದೂ ಸೇರಲಿದೆ ಎಂದು ವ್ಯಂಗ್ಯವಾಡಿದ್ದಾರೆ.
ಭೂಪೇಂದ್ರ ಸಿಂಗ್ ಚೌಧರಿ ಅವರು ಮೂಲತಃ ಮೊರಾದಾಬಾದ್ನವರಾಗಿದ್ದು, ರಾಜ್ಯ ವಿಧಾನಪರಿಷತ್ ಸದಸ್ಯರಾಗಿದ್ದಾರೆ. ಶಾಮ್ಲಿಯಲ್ಲಿ ನಡೆದ ಯುವಜನರ ಸಮಾವೇಶದಲ್ಲಿ ಈ ಮಾತುಗಳನ್ನಾಡಿದ್ದಾರೆ.
ಖಂಡಿತವಾಗಿಯೂ ನಾನು ಹೇಳಿದ್ದು ಆಗಿಯೇ ಆಗುತ್ತದೆ ಎಂದಿದ್ದಾರೆ. ನಾವು ಬಿಜೆಪಿ ಅಜೆಂಡಾ ಮುಂದುವರಿಸುತ್ತೇವೆ. ನಮ್ಮ ಅಜೆಂಡಾದಿಂದಾಗಿಯೇ ಅಂದು ರಾಹುಲ್ ಗಾಂಧಿ ಜನಿವಾರ ಹಾಕಿದ್ದು, ಅಖಿಲೇಶ್ ಯಾದವ್ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದು ಎಂದು ಸಚಿವರು ಹೇಳಿದ್ದಾರೆ.
ಕೇವಲ ಅಲ್ಪಸಂಖ್ಯಾತರ ಓಲೈಕೆಯಲ್ಲಿ ತೊಡಗಿರುವವರು ರಾಮನ ಅಸ್ತಿತ್ವವನ್ನೇ ಒಪ್ಪಿಕೊಳ್ಳದೆ, ಅವನನ್ನು ಕಾಲ್ಪನಿಕ ಎಂದವರೆಲ್ಲ ಈಗ ಜನಿವಾರ ಧರಿಸುತ್ತಿದ್ದಾರೆ.ದೇಗುಲಗಳಿಗೆ ಭೇಟಿ ಕೊಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ