ಕೇಂದ್ರ ಸರ್ಕಾರದ ಕೋವಿಡ್ ಸಾವಿನ ಸಂಖ್ಯೆ 'ಸುಳ್ಳು: ಮಲ್ಲಿಕಾರ್ಜುನ ಖರ್ಗೆ
ಕೋವಿಡ್-19 ಸಾಂಕ್ರಾಮಿಕದಿಂದ ದೇಶದಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆ 4-5 ಲಕ್ಷ ಎಂದು ಕೇಂದ್ರ ಸರ್ಕಾರ ನೀಡಿರುವ ಅಂಕಿಅಂಶ ಸುಳ್ಳು ಮತ್ತು ಬದಲಾಗದು ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ದೇಶದಲ್ಲಿ ಇದುವರೆಗೆ ಸರಾಸರಿ ಸಾವುಗಳ ಸಂಖ್ಯೆ 52.4 ಲಕ್ಷಕ್ಕಿಂತ ಕಡಿಮೆಯಿಲ್ಲ ಎಂದಿದ್ದಾರೆ.
Published: 20th July 2021 08:05 PM | Last Updated: 21st July 2021 01:35 PM | A+A A-

ಮಲ್ಲಿಕಾರ್ಜುನ ಖರ್ಗೆ
ನವದೆಹಲಿ: ಕೋವಿಡ್-19 ಸಾಂಕ್ರಾಮಿಕದಿಂದ ದೇಶದಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆ 4-5 ಲಕ್ಷ ಎಂದು ಕೇಂದ್ರ ಸರ್ಕಾರ ನೀಡಿರುವ ಅಂಕಿಅಂಶ ಸುಳ್ಳು ಮತ್ತು ಬದಲಾಗದು ಎಂದು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದು, ದೇಶದಲ್ಲಿ ಇದುವರೆಗೆ ಸರಾಸರಿ ಸಾವುಗಳ ಸಂಖ್ಯೆ 52.4 ಲಕ್ಷಕ್ಕಿಂತ ಕಡಿಮೆಯಿಲ್ಲ ಎಂದಿದ್ದಾರೆ.
ರಾಜ್ಯಸಭೆಯಲ್ಲಿ ಕೋವಿಡ್-19 ನಿರ್ವಹಣೆ ಕುರಿತ ಕಿರು ಅವಧಿಯ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಖರ್ಗೆ, ಕೋವಿಡ್-19 ಸಾಂಕ್ರಾಮಿಕ ನಿರ್ವಹಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿಫಲವಾಗಿದ್ದಾರೆ ಮತ್ತು ಆರೋಗ್ಯ ಬಿಕ್ಕಟ್ಟು ಅಸರ್ಮಪಕ ನಿರ್ವಹಣೆಗಾಗಿ ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್ ಅವರನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದರು.
ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರನ್ನು ರಕ್ಷಿಸಲು ಸರ್ಕಾರಕ್ಕೆ ಸಹಕರಿಸಲು ಕಾಂಗ್ರೆಸ್ ಸಿದ್ಧವಿತ್ತು. ಸಾಂಕ್ರಾಮಿಕ ನಿರ್ವಹಣೆಗಾಗಿ ಕೆಲವೊಂದು ಸಲಹೆಗಳನ್ನು ನೀಡಿ ಪಕ್ಷದಿಂದ ಮೂರು ಪತ್ರಗಳನ್ನು ಬರೆದರೂ ಪ್ರಧಾನ ಮಂತ್ರಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಎಂದು ಅವರು ಹೇಳಿದರು.
ದೇಶದಲ್ಲಿ ಸಂಭವಿಸಿರುವ ಕೋವಿಡ್-19 ಸಾವಿನ ಸಂಖ್ಯೆ ಬಗ್ಗೆ ಸರ್ಕಾರ ಸುಳ್ಳು ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಸತ್ಯಕ್ಕೆ ದೂರವಾಗಿದೆ. 6,38,565 ಲಕ್ಷ ಜನರು ಹಳ್ಳಿಗಳಲ್ಲಿಯೇ ಸಾವನ್ನಪ್ಪಿದ್ದಾರೆ. ಹಳ್ಳಿಗಳಲ್ಲಿ ಐದು ಸೋಂಕಿತರು ಸಾವನ್ನಪ್ಪಿದ್ದರೂ ಒಟ್ಟಾರೇ ಸಾವನ್ನಪ್ಪಿದರ ಸಂಖ್ಯೆ 31,91,825ಕ್ಕೆ ಏರಿಕೆಯಾಗುತ್ತದೆ. 7,935 ನಗರ ಪ್ರದೇಶಗಳಲ್ಲಿ ಪ್ರತಿಯೊಂದು ನಗರದಲ್ಲಿ 10 ಸಾವು ಪ್ರಕರಣಗಳನ್ನು ತೆಗೆದುಕೊಂಡರೂ 7,93,500ಕ್ಕೆ ಏರಿಕೆಯಾಗಲಿದೆ. ಇದೇ ರೀತಿಯಲ್ಲಿ 19 ಮೆಟ್ರೋಗಳಲ್ಲಿ ಅಂದಾಜು 3,60,000 ಸಾವು ಸಂಭವಿಸಿರಬಹುದು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷದವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸರಿಯಾದ ರೀತಿಯಲ್ಲಿ ಚರ್ಚೆ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಹಿರಿಯ ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಹೇಳಿದರು. ಪರಸ್ಪರ ಟೀಕೆಗೆ ಇಳಿಯದಂತೆ ಸದನದ ನಾಯಕ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸದಸ್ಯರಿಗೆ ಹೇಳಿದರು. ನಂತರ ಚರ್ಚೆ ಮುಂದುವರೆಸದ ಖರ್ಗೆ, ಸರ್ಕಾರ ಅಂದಾಜಿಸಿದಕ್ಕಿಂತಲೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಗಂಗಾ ನದಿಯಲ್ಲಿ ತೇಲಿಬಂದ ಸಾವುಗಳ ಸಂಖ್ಯೆಗೂ ಲೆಕ್ಕವಿರಲಿಲ್ಲ ಎಂದು ಸದನಕ್ಕೆ ತಿಳಿಸಿದರು.
ಕಳೆದ ವರ್ಷ ಇದ್ದಕ್ಕಿದ್ದಂತೆ ಲಾಕ್ ಡೌನ್ ಹೇರಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ ಅವರು, ಇದರಿಂದ ಆರ್ಥಿಕ ಕುಸಿತವಾಗಿದ್ದು, ನಿರುದ್ಯೋಗ ಹೆಚ್ಚಾಗಿದೆ ಮತ್ತು ಹಣದುಬ್ಬರದ ಸಮಸ್ಯೆಯಾಗಿದೆ. ಎರಡನೇ ಅಲೆ ವೇಳೆಯಲ್ಲಿ ಹಾಸಿಗೆ, ವೆಂಟಿಲೇಟರ್ ಮತ್ತು ಆಕ್ಸಿಜನ್ ಗಳ ಕೊರತೆ ಉಂಟಾಗಿತ್ತು ಆದಾಗ್ಯೂ, ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಸಾಂಕ್ರಾಮಿಕ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ತೀವ್ರ ವಾಗ್ದಾಳಿ ನಡೆಸಿದರು.