'ಇಂದು ದೇಶದಲ್ಲಿ ಯಾವುದಾದರೂ ರಾಷ್ಟ್ರೀಯ ಪಕ್ಷವಿದ್ದರೆ ಅದು ಬಿಜೆಪಿ': ಕಾಂಗ್ರೆಸ್ ಮಾಜಿ ನಾಯಕ ಜಿತಿನ್ ಪ್ರಸಾದ ಕೇಸರಿ ಪಕ್ಷಕ್ಕೆ ಸೇರ್ಪಡೆ!

ಕಾಂಗ್ರೆಸ್ ನ ಮತ್ತೊಬ್ಬ ಜನಪ್ರಿಯ ನಾಯಕ, ರಾಹುಲ್ ಗಾಂಧಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದ ಜಿತೇಂದ್ರ ಪ್ರಸಾದ್ ಅವರ ಪುತ್ರ ಜಿತಿನ್ ಪ್ರಸಾದ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಜಿತಿನ್ ಪ್ರಸಾದ ರನ್ನು ಬಿಜೆಪಿಗೆ ಬರಮಾಡಿಕೊಂಡ ಕೇಂದ್ರ ಸಚಿವ ಪಿಯೂಷ್ ಗೋಯಲ್
ಜಿತಿನ್ ಪ್ರಸಾದ ರನ್ನು ಬಿಜೆಪಿಗೆ ಬರಮಾಡಿಕೊಂಡ ಕೇಂದ್ರ ಸಚಿವ ಪಿಯೂಷ್ ಗೋಯಲ್
Updated on

ನವದೆಹಲಿ: ಕಾಂಗ್ರೆಸ್ ನ ಮತ್ತೊಬ್ಬ ಜನಪ್ರಿಯ ನಾಯಕ, ರಾಹುಲ್ ಗಾಂಧಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ, ಕಾಂಗ್ರೆಸ್ ನ ಹಿರಿಯ ನಾಯಕರಾಗಿದ್ದ ಜಿತೇಂದ್ರ ಪ್ರಸಾದ್ ಅವರ ಪುತ್ರ ಜಿತಿನ್ ಪ್ರಸಾದ ಬುಧವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಸಂದರ್ಭದಲ್ಲಿ ಜಿತಿನ್ ಪ್ರಸಾದ ಸೇರ್ಪಡೆ ಕೇಸರಿ ಪಕ್ಷಕ್ಕೆ ಬಲ ಬಂದಂತಾಗಿದ್ದು, ಕಾಂಗ್ರೆಸ್ ಗೆ ಹೊಡೆತ ಬಿದ್ದಿದೆ.

ಕೇಂದ್ರ ರೈಲ್ವೆ ಖಾತೆ ಸಚಿವ ಪಿಯೂಷ್ ಗೋಯಲ್ ಮತ್ತು ಬಿಜೆಪಿ ಮುಖ್ಯ ವಕ್ತಾರ ಅನಿಲ್ ಬಲುನಿ ಸಮ್ಮುಖದಲ್ಲಿ ಜಿತಿನ್ ಪ್ರಸಾದ ದೆಹಲಿಯಲ್ಲಿಂದು ಬಿಜೆಪಿಗೆ ಸೇರ್ಪಡೆಯಾದರು. 

ಔಪಚಾರಿಕವಾಗಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಯಾವುದಾದರೂ ರಾಷ್ಟ್ರೀಯ ಪಕ್ಷ ದೇಶದಲ್ಲಿದ್ದರೆ ಅದು ಬಿಜೆಪಿ, ಉಳಿದ ಪಕ್ಷಗಳೆಲ್ಲಾ ಕೆಲವು ಜನರಿಗೆ ಅಥವಾ ಪ್ರದೇಶಕ್ಕೆ ಸೀಮಿತವಾಗಿದೆ ಎಂದರು.

ಇಷ್ಟು ವರ್ಷಗಳ ಕಾಲ ನನಗೆ ರಾಜಕೀಯದಲ್ಲಿ ಕೆಲಸ ಮಾಡಿ, ನಾಯಕನಾಗಿ ಬೆಳೆಯಲು ಸಹಕರಿಸಿದ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಧನ್ಯವಾದಗಳು, ಇನ್ನು ಮುಂದೆ ನಾನು ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿ ದುಡಿಯುತ್ತೇನೆ, ಜನರಿಗೆ ಸಹಾಯ ಮಾಡಬೇಕೆಂದರೆ, ಕೆಲಸ ಮಾಡಬೇಕೆಂದರೆ ಬಿಜೆಪಿಯೇ ಸರಿಯಾದ ಪಕ್ಷ ಎಂದು ನನಗೆ ಮನವರಿಕೆಯಾಗಿದೆ, ಹೀಗಾಗಿ ಬಿಜೆಪಿ ಸೇರಿದ್ದೇನೆ ಎಂದರು.

47 ವರ್ಷದ ಜಿತಿನ್ ಪ್ರಸಾದ ಕೇಂದ್ರದಲ್ಲಿ ಸಚಿವರಾಗಿದ್ದವರು, ಉತ್ತರ ಪ್ರದೇಶದ ಬ್ರಾಹ್ಮಣ ಸಮುದಾಯದಿಂದ ಬಂದವರು. ಈ ಹಿಂದೆ ಪಶ್ಚಿಮ ಬಂಗಾಳದ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಲಸ ಮಾಡಿದ್ದರು.

ಈ ಹಿಂದೆ ಉತ್ತರ ಪ್ರದೇಶದಲ್ಲಿ ಲೋಕಸಭಾ ಸ್ಥಾನದಿಂದ ಎರಡು ಬಾರಿ ಸ್ಪರ್ಧಿಸಿ ಜಿತಿನ್ ಪ್ರಸಾದ ಸೋಲು ಕಂಡಿದ್ದರು. ಮುಂದಿನ ವರ್ಷ ಅಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಈ ಹೊತ್ತಿನಲ್ಲಿ ಬಿಜೆಪಿ ಸೇರ್ಪಡೆ ರಾಜಕೀಯವಾಗಿ ಅವರು ಬೆಳೆಯಲು ಸೂಕ್ತ ನಿರ್ಧಾರ ಎಂದು ವಿಶ್ಲೇಷಿಸಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯವನ್ನು ಕಡೆಗಣಿಸಲಾಗುತ್ತಿದೆ ಎಂದು ಜನರು ಬಿಜೆಪಿ ಬಗ್ಗೆ ಅಭಿಪ್ರಾಯ ಹೊಂದಿರುವ ಸಂದರ್ಭದಲ್ಲಿ ಪಕ್ಷಕ್ಕೆ ಸಹ ಜಿತಿನ್ ಸೇರ್ಪಡೆ ಧನಾತ್ಮಕ ಅಂಶವೇ ಆಗಿದೆ.

2019ರ ಲೋಕಸಭಾ ಚುನಾವಣೆ ಸಮಯದಲ್ಲಿಯೇ ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆಯಾಗುತ್ತಾರೆ ಎಂಬ ವದಂತಿಗಳಿದ್ದವು. ಆಗ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಪಕ್ಷ ಬಿಟ್ಟು ಹೋಗದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com