ತಿಹಾರ್ ಜೈಲಿನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡಲು ಕೋರ್ಟ್ ಅನುಮತಿ ಕೇಳಿದ ಅಲ್ ಖೈದಾ ಉಗ್ರ!
ತಿಹಾರ್ ಜೈಲಿನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡಲು ಅನುಮತಿ ಕೋರಿ ಅಲ್ ಖೈದಾ ಸಂಘಟನೆಯ ಉಗ್ರನೊಬ್ಬ ಗುರುವಾರ ಇಲ್ಲಿನ ನ್ಯಾಯಾಲಯವೊಂದಕ್ಕೆ ಅರ್ಜಿ ಸಲ್ಲಿಸಿದ್ದಾನೆ.
Published: 13th May 2021 04:44 PM | Last Updated: 13th May 2021 06:21 PM | A+A A-

ತಿಹಾರ್ ಜೈಲು
ನವದೆಹಲಿ: ತಿಹಾರ್ ಜೈಲಿನಲ್ಲಿ ಡಾಕ್ಟರ್ ಆಗಿ ಕೆಲಸ ಮಾಡಲು ಅನುಮತಿ ಕೋರಿ ಅಲ್ ಖೈದಾ ಸಂಘಟನೆಯ ಉಗ್ರನೊಬ್ಬ ಗುರುವಾರ ಇಲ್ಲಿನ ನ್ಯಾಯಾಲಯವೊಂದಕ್ಕೆ ಅರ್ಜಿ ಸಲ್ಲಿಸಿದ್ದಾನೆ.
ವಿಶೇಷ ನ್ಯಾಯಾಧೀಶ ಧರ್ಮೇಂದರ್ ರಾಣಾ ಬಳಿ ಬುಧವಾರ ಅರ್ಜಿ ಸಲ್ಲಿಸಿರುವ ಆರೋಪಿ ಸಬೀಲ್ ಅಹ್ಮದ್, ತನ್ನ ವೈದ್ಯಕೀಯ ವೃತ್ತಿಯಲ್ಲಿನ ಪರಿಣತಿ ಮತ್ತು ಅನುಭವದಿಂದ ಕೇಂದ್ರ ಕಾರಾಗೃಹದಲ್ಲಿನ ಖೈದಿಗಳಿಗೆ ಚಿಕಿತ್ಸೆ ಹಾಗೂ ಕೋವಿಡ್-19 ಪ್ರಕರಣಗಳ ಉಲ್ಬಣ ನಿಭಾಯಿಸಲು ನೆರವಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾನೆ.
ಅಹ್ಮದ್, ನಿಷೇಧಿತ ಅಲ್ ಖೈದಾ ಸಂಘಟನೆಯ ಸದ್ಯಸನಾಗಿದ್ದು, ಭಾರತ ಹಾಗೂ ವಿದೇಶದಲ್ಲಿನ ಸಂಘಟನೆಯ ಇತರ ಸದಸ್ಯರಿಗೆ ಹಣಕಾಸು ನೆರವಿನ ಆರೋಪದ ಮೇರೆಗೆ ಫೆಬ್ರವರಿ 22 ರಂದು ದೆಹಲಿಯ ವಿಶೇಷ ಘಟಕದ ಪೊಲೀಸರು ಬಂಧಿಸಿದ್ದರು.
ಜೈಲು ಆಡಳಿತಕ್ಕೆ ನೆರವಾಗಲು ಆರೋಪಿಗೆ ಅವಕಾಶ ನೀಡುವಂತೆ ಜೈಲಿನ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಬೇಕೆಂದು
ಕೋರಿ ಅಹ್ಮದ್ ವಕೀಲ ಎಂಎಸ್ ಖಾನ್ ನ್ಯಾಯಾಲಯವನ್ನು ಕೋರಿದ್ದಾರೆ. ಅಹ್ಮದ್ ಎಂಬಿಬಿಎಸ್ ಡಾಕ್ಟರ್ ಆಗಿದ್ದು, ಗಂಭೀರ ಪ್ರಕರಣಗಳ ಚಿಕಿತ್ಸೆಯಲ್ಲಿ ಏಳುವ ವರ್ಷಗಳ ಅನುಭವ ಹೊಂದಿದ್ದಾರೆ. ಅವರ ಅನುಭವದಿಂದ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ಚಿಕಿತ್ಸೆ ಹಾಗೂ ಕೋವಿಡ್-19 ಪ್ರಕರಣಗಳನ್ನು ನಿಭಾಯಿಸಲು ನೆರವಾಗಲಿದೆ ಎಂದು ವಕೀಲರು ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಹ್ಮದ್ ಜೂನ್ 30, 2007ರಲ್ಲಿ ಇಂಗ್ಲೆಂಡ್ ನ ಗ್ಲ್ಯಾಸ್ಗೋ ವಿಮಾನ ನಿಲ್ದಾಣ ಮೇಲಿನ ಆತ್ಮಹತ್ಯಾ ಭಯೋತ್ಪಾದಕ
ದಾಳಿಯಲ್ಲೂ ಆರೋಪಿಯಾಗಿದ್ದಾನೆ. ಆತನನ್ನು ಆಗಸ್ಟ್ 20, 2020 ರಂದು ಸೌದಿ ಅರೇಬಿಯಾದಿಂದ ಗಡೀಪಾರು ಮಾಡಲಾಯಿತು. ಬೆಂಗಳೂರಿನಲ್ಲಿ ದಾಖಲಾಗಿದ್ದ ಮತ್ತೊಂದು ಭಯೋತ್ಪಾದಕ ಕೇಸ್ ನಲ್ಲಿ ಎನ್ ಐಎ ವಶಕ್ಕೆ ಪಡೆದುಕೊಂಡಿತ್ತು. ನಂತರ ಈ ವರ್ಷದ ಫೆಬ್ರವರಿ 22 ರಂದು ದೆಹಲಿಯ ವಿಶೇಷ ಘಟಕದ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದರು.