ಶಾರುಖ್ ಖಾನ್ ಪುತ್ರನ ಕ್ರೂಸ್ ಡ್ರಗ್ಸ್ ಕೇಸ್‌ ಹೊಸ ತನಿಖಾಧಿಕಾರಿ ಹೆಗಲಿಗೆ: ಯಾರು ಈ ಸಂಜಯ್ ಕುಮಾರ್ ಸಿಂಗ್?

ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಭಾಗಿಯಾಗಿದ್ದಾರೆ ಎನ್ನಲಾದ ಡ್ರಗ್ ಕೇಸ್‌ನ್ನು ಸಂಜಯ್ ಕುಮಾರ್ ಸಿಂಗ್ ಅವರಿಗೆ ಹಸ್ತಾಂತರ ಮಾಡಲಾಗಿದೆ.
ಸಮೀರ್ ವಾಂಖೆಡೆ, ಆರ್ಯನ್ ಖಾನ್ ಮತ್ತು ಸಂಜಯ್ ಸಿಂಗ್
ಸಮೀರ್ ವಾಂಖೆಡೆ, ಆರ್ಯನ್ ಖಾನ್ ಮತ್ತು ಸಂಜಯ್ ಸಿಂಗ್

ಮುಂಬಯಿ:  ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಭಾಗಿಯಾಗಿದ್ದಾರೆ ಎನ್ನಲಾದ ಡ್ರಗ್ ಕೇಸ್‌ನ್ನು ಸಂಜಯ್ ಕುಮಾರ್ ಸಿಂಗ್ ಅವರಿಗೆ ಹಸ್ತಾಂತರ ಮಾಡಲಾಗಿದೆ.

ಮುಂಬೈ ನಾರ್ಕೋಟಿಕ್ ಕಂಟ್ರೋಲ್ ಬ್ಯುರೋ  ವಲಯ ಅಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ತನಿಖೆ ಮಾಡುತ್ತಿದ್ದ ಆರ್ಯನ್ ಖಾನ್ ಡ್ರಗ್ ಕೇಸು ಇನ್ಮುಂದೆ ಐಪಿಎಸ್ ಅಧಿಕಾರಿಯಾಗಿರುವ ಸಂಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.

ಆರ್ಯನ್ ಖಾನ್ ಪ್ರಕರಣ ಸೇರಿದಂತೆ ಒಟ್ಟು 6 ಕೇಸುಗಳನ್ನು ಸಂಜಯ್ ಕುಮಾರ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ  ವರ್ಗಾವಣೆ ಮಾಡಲಾಗಿದೆ. ಮುಂಬೈ ವಲಯದ ಎನ್ ಸಿ ಬಿ ಅಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ವಿರುದ್ಧ ಭ್ರಷ್ಟಾಚಾರ ಹಾಗೂ ತನಿಖೆಯಲ್ಲಿನ ಕಾರ್ಯಲೋಪಗಳ ಕುರಿತಂತೆ ಪ್ರಶ್ನೆ ಎದ್ದಿರುವ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.

ಯಾರು ಈ ಸಂಜಯ್ ಕುಮಾರ್ ಸಿಂಗ್?

ಸಂಜಯ್ ಕುಮಾರ್ ಸಿಂಗ್ 1996-ಬ್ಯಾಚ್ ನ ಒಡಿಶಾ ಕೇಡರ್ ಐಪಿಎಸ್ (ಭಾರತೀಯ ಪೊಲೀಸ್ ಸೇವೆ) ಅಧಿಕಾರಿ. ಒಡಿಶಾ ಪೊಲೀಸ್ ಮತ್ತು ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ನಲ್ಲಿ ವಿವಿಧ ಹುದ್ದೆಗಳಲ್ಲಿ ಈಗಾಗಲೇ ಸಂಜಯ್ ಕುಮಾರ್ ಸಿಂಗ್ ಸೇವೆ ಸಲ್ಲಿಸಿದ್ದಾರೆ.

ಎನ್‌ಸಿಬಿಗೆ ಸೇರುವ ಮೊದಲು, ಸಿಂಗ್ ಅವರು ಒಡಿಶಾ ಪೊಲೀಸ್‌ನ ಡ್ರಗ್ ಟಾಸ್ಕ್ ಫೋರ್ಸ್ (ಡಿಟಿಎಫ್) ಹೆಚ್ಚುವರಿ ಮಹಾನಿರ್ದೇಶಕರಾಗಿದ್ದರು. ತಮ್ಮ ಅಧಿಕಾರವಧಿಯಲ್ಲಿ ಸಿಂಗ್, ಒಡಿಶಾದಲ್ಲಿ ಡ್ರಗ್ ದಂಧೆಕೋರರ ಸಿಂಹಸ್ವಪ್ನವಾಗಿದ್ದರು. ಭುವನೇಶ್ವರದಲ್ಲಿ ಹಲವಾರು ಮಾದಕವಸ್ತು ಕಳ್ಳಸಾಗಣೆ ಕೇಸ್ ಗಳನ್ನು ಸಂಜಯ್ ಕುಮಾರ್ ಬೇಧಿಸಿದ್ದಾರೆ.

ಇನ್ನು 2008 ರಿಂದ 2015ರವರೆಗೆ ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಗಿ ಸಿಬಿಐನೊಂದಿಗೆ ಕಾರ್ಯ ನಿರ್ವಹಿಸಿರುವ ಸಂಜಯ್ ಕುಮಾರ್ ಸಿಂಗ್, ಹಲವಾರು ವಿಐಪಿ ಕೇಸ್ ಗಳನ್ನು ನಿರ್ವಹಿಸಿದ್ದಾರೆ.ಒಡಿಶಾದಲ್ಲಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಹಾಗೂ ಟ್ವಿನ್ ಸಿಟಿಯ ಹೆಚ್ಚುವರಿ ಕಮಿಷನರ್ ಆಗಿಯೂ ಕೆಲಸ ಮಾಡಿದ್ದಾರೆ.

ಜನವರಿ 2021 ರಲ್ಲಿ ಸಂಜಯ್ ಕುಮಾರ್ ಸಿಂಗ್ ಅವರನ್ನು ಕೇಂದ್ರ ಏಜೆನ್ಸಿಗೆ ವರ್ಗಾವಣೆ ಮಾಡಲಾಯಿತು. ಅಲ್ಲದೆ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ ಉಪ ಮಹಾನಿರ್ದೇಶಕರಾಗಿ (ಡಿಡಿಜಿ) ಸೇರ್ಪಡೆಗೊಂಡರು. ಈವರೆಗೆ ಸಂಜಯ್ ಕುಮಾರ್ ವಿರುದ್ಧ ಶಿಸ್ತು ಕ್ರಮ ಅಥವಾ ಕ್ರಿಮಿನಲ್ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಆಪಾದನೆಗಳಿಲ್ಲ. ಈ ಹಿನ್ನೆಲೆಯಲ್ಲಿ ಶಾರುಖ್ ಖಾನ್ ಪುತ್ರ ಭಾಗಿಯಾಗಿದ್ದಾರೆನ್ನಲಾದ ಹೈಪ್ರೊಫೈಲ್ ಕೇಸ್ ಮುಂದಿನ ದಿನಗಳಲ್ಲಿ ಯಾವ ರೀತಿಯ ಸ್ವರೂಪ ಪಡೆದುಕೊಳ್ಳಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com