'ಕಾಂಗ್ರೆಸ್ ಆಡಳಿತದಲ್ಲಿ ರಫೇಲ್ ಕಿಕ್ ಬ್ಯಾಕ್, 'ಐಎನ್‌ಸಿ ಎಂದರೆ ಐ ನೀಡ್ ಕಮಿಷನ್': ಬಿಜೆಪಿ ತಿರುಗೇಟು
ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭಾರಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ಫ್ರಾನ್ಸ್ ಮಾಧ್ಯಮ ಸಂಸ್ಥೆ ಮೀಡಿಯಾಪಾರ್ಟ್ ಮಾಡಿರುವ ವರದಿ ಈಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು,...
Published: 09th November 2021 05:20 PM | Last Updated: 09th November 2021 06:14 PM | A+A A-

ರಫೇಲ್ ವಿಮಾನ
ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಭಾರಿ ಕಿಕ್ ಬ್ಯಾಕ್ ಪಡೆಯಲಾಗಿದೆ ಎಂಬ ಫ್ರಾನ್ಸ್ ಮಾಧ್ಯಮ ಸಂಸ್ಥೆ ಮೀಡಿಯಾಪಾರ್ಟ್ ಮಾಡಿರುವ ವರದಿ ಈಗ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಈ ಕಿಕ್ ಬ್ಯಾಕ್ ಹಗರಣ ನಡೆದಿದೆ ಎಂದು ಮಂಗಳವಾರ ಬಿಜೆಪಿ ತಿರುಗೇಟು ನೀಡಿದೆ.
ರಫೇಲ್ ಫೈಟರ್ ಜೆಟ್ ಖರೀದಿಯಲ್ಲಿ ನಡೆದ ಭ್ರಷ್ಟಾಚಾರವನ್ನು ಮುಚ್ಚಿಹಾಕಲು ಮೋದಿ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಮಧ್ಯವರ್ತಿಯಿಂದ ದೋಷಾರೋಪಣೆಯ ದಾಖಲೆಗಳನ್ನು ವಶಪಡಿಸಿಕೊಂಡಿದ್ದರೂ ಏಕೆ ತನಿಖೆ ಆರಂಭಿಸಲಿಲ್ಲ ಎಂದು ಪ್ರಶ್ನಿಸಿದೆ.
ಇದನ್ನು ಓದಿ: ರಾಫೆಲ್ ಒಪ್ಪಂದದಲ್ಲಿ ಮಧ್ಯವರ್ತಿಗೆ ಹಣ ನೀಡಿರುವುದಕ್ಕೆ ಸಿಬಿಐ, ಇಡಿ ಬಳಿ 2018 ರಿಂದಲೂ ಸಾಕ್ಷ್ಯವಿದೆ: ಫ್ರೆಂಚ್ ಪತ್ರಿಕೆ
ಕಾಂಗ್ರೆಸ್ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು, 2007 ರಿಂದ 2012 ರ ವರೆಗೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. 'ಐಎನ್‌ಸಿ (ಭಾರತೀಯ ನ್ಯಾಷನಲ್ ಕಾಂಗ್ರೆಸ್) ಎಂದರೆ 'ನನಗೆ ಕಮಿಷನ್ ಬೇಕು' (I Need Commission) ಎಂದರ್ಥ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಾಬರ್ಟ್ ವಾದ್ರಾ ಎಲ್ಲರೂ 'ಐ ನೀಡ್ ಕಮಿಷನ್' ಎಂದು ಹೇಳುತ್ತಾರೆ' ಎಂದು ವ್ಯಂಗ್ಯವಾಡಿದ್ದಾರೆ.
ಇಂದು ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾತ್ರಾ, 2019 ರ ಚುನಾವಣೆಗೆ ಮುನ್ನ ವಿರೋಧ ಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ಪಕ್ಷ ರಫೇಲ್ ಬಗ್ಗೆ ಸುಳ್ಳುಗಳನ್ನು ಹರಡಲು ಪ್ರಯತ್ನಿಸಿದ ರೀತಿಯನ್ನು ನಾವೆಲ್ಲರೂ ನೋಡಿದ್ದೇವೆ. ಇದಕ್ಕೆ ರಾಹುಲ್ ಗಾಂಧಿ ಉತ್ತರ ನೀಡಲಿ. 2007-2012ರಲ್ಲಿ ನಿಮ್ಮದೇ ಸರ್ಕಾರ ಅಧಿಕಾರದಲ್ಲಿದ್ದಾಗ ಕಮಿಷನ್ ಪಾವತಿಸಲಾಗಿದೆ ಎನ್ನುವುದು ಈಗ ಬಯಲಾಗಿದೆ. ಅದರಲ್ಲಿದ್ದ ಮಧ್ಯವರ್ತಿಗಳ ಹೆಸರೂ ಹೊರಬಂದಿದೆ' ಎಂದಿದ್ದಾರೆ.
2007ರಿಂದ 2012ರ ಅವಧಿಯಲ್ಲಿ ರಫೇಲ್ ಒಪ್ಪಂದದಲ್ಲಿ ಭಾಗಿಯಾದ ಮಧ್ಯವರ್ತಿಗಳಿಗೆ ಕಿಕ್‌ಬ್ಯಾಕ್ ನೀಡಲಾಗಿತ್ತು. ಈ ಬಗ್ಗೆ ದಾಖಲೆಗಳನ್ನು ಪಡೆದುಕೊಂಡಿದ್ದರೂ ಆರೋಪಗಳ ವಿರುದ್ಧ ಯಾವುದೇ ತನಿಖೆ ಕೈಗೊಳ್ಳುವಲ್ಲಿ ಸಿಬಿಐ ವಿಫಲವಾಗಿತ್ತು ಎಂದು ಮೀಡಿಯಾಪಾರ್ಟ್ ವರದಿ ಹೇಳಿದೆ.