ಕೊನೆಗೂ ಸಿಧು ಬೇಡಿಕೆ ಒಪ್ಪಿದ ಪಂಜಾಬ್ ಸಿಎಂ, ಅಡ್ವೊಕೇಟ್ ಜನರಲ್ ರಾಜೀನಾಮೆ ಅಂಗೀಕಾರ
ಕೊನೆಗೂ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಒತ್ತಡಕ್ಕೆ ಮಣಿದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಚನ್ನಿ ಅವರು ಮಂಗಳವಾರ ರಾಜ್ಯ ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ಅವರ...
Published: 09th November 2021 06:50 PM | Last Updated: 09th November 2021 06:50 PM | A+A A-

ನವಜೋತ್ ಸಿಂಗ್ ಸಿಧು - ಚರಣ್‌ಜಿತ್ ಚನ್ನಿ
ಚಂಡೀಗಢ: ಕೊನೆಗೂ ಪಂಜಾಬ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರ ಒತ್ತಡಕ್ಕೆ ಮಣಿದ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಚನ್ನಿ ಅವರು ಮಂಗಳವಾರ ರಾಜ್ಯ ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಇದರೊಂದಿಗೆ ನೇಮಕಾತಿ ಕುರಿತು ಉಭಯ ನಾಯಕರ ನಡುವಿನ ಅಸಮಾಧಾನಕ್ಕೆ ತೆರೆ ಎಳೆದಿದ್ದಾರೆ.
ಸಿಧು ಅವರು ಅಡ್ವೊಕೇಟ್ ಜನರಲ್ ಎಪಿಎಸ್ ಡಿಯೋಲ್ ಅವರ ರಾಜೀನಾಮೆ ಪಡೆಯಬೇಕು ಎಂಬ ಪೂರ್ವ ಷರತ್ತಿನೊಂದಿಗೆ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಹಿಂಪಡೆದಿದ್ದರು. ಅದರಂತೆ ಅಡ್ವೊಕೇಟ್ ಜನರಲ್ ಡಿಯೋಲ್ ಅವರು ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಇದನ್ನು ಚರಣ್‌ಜಿತ್ ಸಿಂಗ್ ಚನ್ನಿ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ನಿನ್ನೆ ಪಂಜಾಬ್ ಎಐಸಿಸಿ ಉಸ್ತುವಾರಿ ಹರೀಶ್ ಚೌಧರಿ ಅವರು ಚನ್ನಿ ಮತ್ತು ಸಿಧು ಅವರೊಂದಿಗೆ ಸಭೆ ನಡೆಸಿದ್ದರು. ಅಂತಿಮವಾಗಿ ಸಿಎಂ ಚನ್ನಿ ಅವರು ಇಂದು ಡಿಯೋಲ್ ಅವರ ರಾಜೀನಾಮೆ ಅಂಗೀಕರಿಸಿದ್ದಾರೆ.
ಇದನ್ನು ಓದಿ: ಸರ್ಕಾರದ ಕಾರ್ಯನಿರ್ವಹಣೆಗೆ ಸಿಧು ಅಡ್ಡಿ, ತಪ್ಪು ಮಾಹಿತಿ ಹರಡುತ್ತಿದ್ದಾರೆ: ಪಂಜಾಬ್ ಎಜಿ ಎಪಿಎಸ್ ಡಿಯೋಲ್
ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ನ ಹಿರಿಯ ವಕೀಲರಾಗಿರುವ ಡಿಯೋಲ್ ಅವರನ್ನು ಕಳೆದ ಸೆ.27ರಂದು ರಾಜ್ಯದ ಅಡ್ವೊಕೇಟ್ ಜನರಲ್ ಆಗಿ ಚರಣ್‌ಜಿತ್ ಸಿಂಗ್ ಚನ್ನಿ ಸರಕಾರ ನೇಮಕ ಮಾಡಿತ್ತು. ಜತೆಗೆ, ಇಕ್ಬಾಲ್ ಪ್ರೀತ್ ಸಿಂಗ್ ಸಹೋಟಾ ಅವರನ್ನು ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಿತ್ತು. ಈ ನೇಮಕಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರು ಮರುದಿನವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ವರಿಷ್ಠರನ್ನು ಭೇಟಿ ಮಾಡಿದಾಗಲೂ ತಮ್ಮ ಹಠಕ್ಕೆ ಅಂಟಿಕೊಂಡಿದ್ದ ಅವರು, ಈ ಇಬ್ಬರ ನೇಮಕಾತಿ ಆದೇಶ ಪಾಪಸ್ ಪಡೆಯಬೇಕು ಎಂದು ಒತ್ತಾಯಿಸಿದ್ದರು.