ಲೈಂಗಿಕ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು; ಶಿಕ್ಷಕನ ಬಂಧನ
ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ತನ್ನ ಶಿಕ್ಷಕ ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಯಂಬತ್ತೂರಿನಲ್ಲಿ ನಡೆದಿದೆ.
Published: 15th November 2021 12:23 PM | Last Updated: 15th November 2021 04:49 PM | A+A A-

ಸಾವು (ಸಾಂಕೇತಿಕ ಚಿತ್ರ)
ಕೊಯಂಬತ್ತೂರು: ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದ 17 ವರ್ಷದ ವಿದ್ಯಾರ್ಥಿನಿ ತನ್ನ ಶಿಕ್ಷಕ ನೀಡುತ್ತಿದ್ದ ಲೈಂಗಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಯಂಬತ್ತೂರಿನಲ್ಲಿ ನಡೆದಿದೆ.
ಪೋಷಕರು ನೀಡಿರುವ ದೂರಿನ ಆಧಾರದಲ್ಲಿ ಪೊಲೀಸರು ಶಿಕ್ಷಕನನ್ನು ಬಂಧಿಸಿದ್ದಾರೆ. ಶಿಕ್ಷಕನ ಲೈಂಗಿಕ ಕಿರುಕುಳದಿಂದಲೇ ಆಕೆ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಂಡಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ಆರ್ ಎಸ್ ಪುರಮ್ ನ ಶಾಲೆಯಲ್ಲಿ ವಿದ್ಯಾರ್ಥಿನಿ XI ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು. ಈಕೆಗೆ ಭೌತಶಾಸ್ತ್ರ ಕಲಿಸುತ್ತಿದ್ದ ಕೆ.ಮಿಥುನ್ ಚಕ್ರವರ್ತಿ (31) ಎಂಬಾತ ಲೈಂಗಿಕ ಕಿರುಕುಳ ನೀಡುತ್ತಿದ್ದ. ಶಿಕ್ಷಕನ ಕಿರುಕುಳ ತಾಳಲಾರದೇ ಉಕ್ಕಡಮ್ ನಲ್ಲಿನ ತನ್ನ ನಿವಾಸದಲ್ಲಿ ಗುರುವಾರ ರಾತ್ರಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ ಎಂದು ಆಲ್ ವುಮೆನ್ ಪೊಲೀಸ್ (ವೆಸ್ಟ್) ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ ಚಕ್ರವರ್ತಿ ತನ್ನ ವಿದ್ಯಾರ್ಥಿನಿ ಮೇಲೆ ಮಾರ್ಚ್ ನಲ್ಲಿ ನಡೆದ ವಿಶೇಷ ತರಗತಿಗಳ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ವಿಷಯವನ್ನು ವಿದ್ಯಾರ್ಥಿನಿ ಶಾಲಾ ಮ್ಯಾನೇಜ್ಮೆಂಟ್ ಗಮನಕ್ಕೆ ತಂದಿದ್ದರು ಹಾಗೂ ಶಾಲಾ ಆಡಳಿತ ಮಂಡಳಿ ಶಿಕ್ಷಕನ ವಿರುದ್ಧ ಕ್ರಮವನ್ನೂ ಜರುಗಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಆದರೆ ವಿದ್ಯಾರ್ಥಿನಿಯ ತಂದೆ ಇದನ್ನು ನಿರಾಕರಿಸಿದ್ದಾರೆ.
2 ತಿಂಗಳ ಹಿಂದೆ ಪೋಷಕರು ಶಾಲೆಯಿಂದ ಟಿ.ಸಿ ಪಡೆದು ಆಕೆಯನ್ನು ಆರ್ ಎಸ್ ಪುರಮ್ ನ ಕಾರ್ಪೊರೇಷನ್ ಶಾಲೆಗೆ ಸೇರಿಸಿದ್ದರು. ಗುರುವಾರ ಸಂಜೆ 4.45 ಕ್ಕೆ ಆಕೆ ತನ್ನ ಸ್ನೇಹಿತೆಗೆ ಕರೆ ಮಾಡಿ, ತಾನು ಒತ್ತಡ ಎದುರಿಸುತ್ತಿರುವುದಾಗಿ ಹೇಳಿದ್ದಾಳೆ. ಸಂಜೆ 7 ರ ವೇಳೆಗೆ ಆಕೆಯ ಸ್ನೇಹಿತ ಮನೆಗೆ ಬಂದು ಆಕೆಯ ಪೋಷಕರಿಗೆ ಈ ವಿಷಯ ತಿಳಿಸಿದ್ದಾನೆ. ಆದರೆ ಅಷ್ಟರಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣಾಗಿದ್ದಳು.
ಆತ್ಮಹತ್ಯೆಗೂ ಮುನ್ನ ಬರೆದಿರುವ ಪತ್ರದಲ್ಲಿ ವಿದ್ಯಾರ್ಥಿನಿ ತನ್ನ ಶಿಕ್ಷಕನಷ್ಟೇ ಅಲ್ಲದೇ ಇನ್ನೂ ಇಬ್ಬರು ತನಗೆ ಕಿರುಕುಳ ನೀಡಿರುವುದಾಗಿ ಹೇಳಿದ್ದಾಳೆ. ಸಂತ್ರಸ್ತೆ ಹಾಗೂ ಆರೋಪಿಯ ನಡುವೆ ನಡೆದಿರುವ ಸಂಭಾಷಣೆಯ ಆಡಿಯೋ ಕ್ಲಿಪ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಚಕ್ರವರ್ತಿ ಲೈಂಗಿಕ ಕಿರುಕುಳದ ವಿಷಯವಾಗಿ ಆಕೆಯ ಸ್ನೇಹಿತೆಯರಿಗೂ ತಿಳಿಸಿದ್ದರು. ಆತ ಇನ್ನೂ ಹಲವು ವಿದ್ಯಾರ್ಥಿನಿಗಳೊಂದಿಗೆ ಅಸಭ್ಯವಾಗಿ ವರ್ತಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ. ಸೆಕ್ಷನ್ 306 ರ ಪ್ರಕಾರ ಆತ್ಮಹತ್ಯೆಗೆ ಪ್ರಚೋದನೆ, ಪೋಸ್ಕೋ ಕಾಯ್ದೆಯಡಿ ಶಿಕ್ಷಕನನ್ನು ಬಂಧಿಸಲಾಗಿದೆ.