ಪಂಪಾ ನದಿಯಲ್ಲಿ ನೀರಿನ ಮಟ್ಟ ಏರಿಕೆ: ಇಂದು ಶಬರಿಮಲೆ ಯಾತ್ರೆ ಸ್ಥಗಿತ

ಮಳೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಪಂಪಾ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿರುವಾಗ ಪತ್ತನಂತಿಟ್ಟ ಜಿಲ್ಲಾಡಳಿತ ಇಂದು ಶನಿವಾರ ಶಬರಿಮಲೆ ಯಾತ್ರೆಯನ್ನು ರದ್ದುಗೊಳಿಸಿದೆ.
ಶಬರಿಮಲೆ ದೇವಸ್ಥಾನ
ಶಬರಿಮಲೆ ದೇವಸ್ಥಾನ

ಪತ್ತನಂತಿಟ್ಟ: ಮಳೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆ ಪಂಪಾ ನದಿಯ ನೀರಿನ ಮಟ್ಟ ಅಪಾಯದ ಮಟ್ಟ ಮೀರಿ ಹರಿಯುತ್ತಿರುವಾಗ ಪತ್ತನಂತಿಟ್ಟ ಜಿಲ್ಲಾಡಳಿತ ಇಂದು ಶನಿವಾರ ಶಬರಿಮಲೆ ಯಾತ್ರೆಯನ್ನು ರದ್ದುಗೊಳಿಸಿದೆ.

ಪತ್ತನಂತಿಟ್ಟ ಜಿಲ್ಲಾಧಿಕಾರಿ ದಿವ್ಯ ಎಸ್ ಐಯ್ಯರ್, ಪಂಪಾದಿಂದ ಮುಂದೆ ಹೋಗಲು ಯಾತ್ರಿಕರಿಗೆ ಬಿಡುವುದಿಲ್ಲ, ಪಂಪಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತ್ರಿವೇಣಿ ನದಿಯಲ್ಲಿ ಭಾರೀ ಹರಿವು ಇದೆ, ಶಬರಿಮಲೆ ಬೆಟ್ಟಗಳನ್ನು ಚಾರಣ ಮಾಡಲು ಅಯ್ಯಪ್ಪ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಲು ನದಿಯನ್ನು ದಾಟಬೇಕಾಗುತ್ತದೆ. ಭಕ್ತರ ಜೀವದ ಸುರಕ್ಷತೆ ದೃಷ್ಟಿಯಿಂದ ಇಂದು ಯಾತ್ರೆಯನ್ನು ರದ್ದುಗೊಳಿಸಲಾಗಿದೆ ಎಂದಿದ್ದಾರೆ.

ಮೊನ್ನೆ ನವೆಂಬರ್ 16ರಿಂದ ಶಬರಿಮಲೆ ದೇವಸ್ಥಾನ ಎರಡು ತಿಂಗಳ ಮಂಡಲ ಮಕರಜ್ಯೋತಿ ಉತ್ಸವಕ್ಕೆ ತೆರೆದಿರುವುದರಿಂದ ದಕ್ಷಿಣ ಭಾರತ ರಾಜ್ಯಗಳ ಸಾವಿರಾರು ಯಾತ್ರಿಕರು ಶಬರಿಮಲೆಗೆ ತೆರಳುತ್ತಿದ್ದಾರೆ.

ವರ್ಚುವಲ್ ಕ್ಯೂ ಮೂಲಕ ದಿನದ ದರ್ಶನವನ್ನು ಕಾಯ್ದಿರಿಸಿದ ಯಾತ್ರಾರ್ಥಿಗಳಿಗೆ ಹವಾಮಾನ ಪರಿಸ್ಥಿತಿಗಳು ಸುಧಾರಿಸಿದ ನಂತರ ಸಾಧ್ಯವಾದಷ್ಟು ಹತ್ತಿರದ ಸ್ಥಳದಲ್ಲಿ ದರ್ಶನಕ್ಕೆ ಅವಕಾಶವನ್ನು ಒದಗಿಸಲಾಗುತ್ತದೆ. ಹವಾಮಾನ ಸುಧಾರಿಸುವವರೆಗೆ ಯಾತ್ರಾರ್ಥಿಗಳು ನದಿ ದಾಟುವುದನ್ನು ತಪ್ಪಿಸಿ ಸಹಕರಿಸುವಂತೆ ವಿನಂತಿಸುತ್ತೇನೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಹೆಚ್ಚಿನ ಒಳಹರಿವಿನಿಂದಾಗಿ ಕಕ್ಕಿ-ಆನಾತೋಡ್ ಅಣೆಕಟ್ಟು ಮತ್ತು ಪಂಬಾ ಅಣೆಕಟ್ಟುಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ನಿನ್ನೆ ರಾತ್ರಿ ತ್ರಿವೇಣಿ ನದಿಯ ದಡದಲ್ಲಿ ಪಂಪಾ ನದಿ ಉಕ್ಕಿ ಹರಿದಿದ್ದು, ಭಕ್ತರು ನದಿ ದಾಟಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಂದು ಯಾತ್ರೆಯನ್ನು ಸ್ಥಗಿತಗೊಳಿಸಿದೆ.

ಆದರೆ, ಇಂದು ಬೆಳಗ್ಗೆ ಮಣಪ್ಪುರಂನಲ್ಲಿ ನೀರು ಇಳಿಮುಖವಾಗಿದೆ. ಪ್ರಸ್ತುತ ಕಕ್ಕಿ-ಆನಾತೋಡು ಅಣೆಕಟ್ಟಿನ ಎರಡು ಶೆಟರ್‌ಗಳ ಮೂಲಕ 80 ಕ್ಯೂಸೆಕ್‌ ನೀರನ್ನು ಹೊರಬಿಡಲಾಗುತ್ತಿದ್ದು, ಮಳೆ ಮುಂದುವರಿದರೆ 160 ಕ್ಯೂಸೆಕ್‌ಗೆ ನೀರು ಹರಿಸಲಾಗುವುದು, ಮಳೆ ಮುಂದುವರಿದರೆ ಪಂಪಾ ಅಣೆಕಟ್ಟಿನ ಶೆಟರ್‌ಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. 

ನಿಲಕ್ಕಲ್‌ನಲ್ಲಿ ತಂಗಿರುವ ಭಕ್ತರಿಗೆ ಅವರ ಸುರಕ್ಷತೆಯನ್ನು ಖಾತ್ರಿಪಡಿಸಿದ ನಂತರ ಇಂದು ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಕೂಡ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com