ಮೋದಿಯ ಉತ್ತರಾಧಿಕಾರಿ?!: ಪ್ರಧಾನಿ ಜೊತೆ ಸಿಎಂ ಯೋಗಿ ಆದಿತ್ಯನಾಥ್ ಆತ್ಮೀಯ ಭಾವದ ಫೋಟೋ ಭರ್ಜರಿ ವೈರಲ್!

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ಬಿಜೆಪಿಗೆ ಅದರಲ್ಲೂ 2024 ರಲ್ಲಿ ಶತಾಯಗತಾಯ ಅಧಿಕಾರವನ್ನು ಉಳಿಸಿಕೊಳ್ಳಲು ಯೋಜನೆ ಹೊಂದಿರುವ ಬಿಜೆಪಿ ವರಿಷ್ಠರಿಗೆ ಈ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. 
ಪ್ರಧಾನಿ ಮೋದಿ ಅವರೊಂದಿಗೆ ಸಿಎಂ ಯೋಗಿ ಆದಿತ್ಯನಾಥ್
ಪ್ರಧಾನಿ ಮೋದಿ ಅವರೊಂದಿಗೆ ಸಿಎಂ ಯೋಗಿ ಆದಿತ್ಯನಾಥ್

ನವದೆಹಲಿ: ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದ್ದು, ಬಿಜೆಪಿಗೆ ಅದರಲ್ಲೂ 2024 ರಲ್ಲಿ ಶತಾಯಗತಾಯ ಅಧಿಕಾರವನ್ನು ಉಳಿಸಿಕೊಳ್ಳಲು ಯೋಜನೆ ಹೊಂದಿರುವ ಬಿಜೆಪಿ ವರಿಷ್ಠರಿಗೆ ಈ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಎದುರಾಗಿದೆ. 

ಇಂತಹ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಅವರು ಆತ್ಮೀಯ ಭಾವದಲ್ಲಿ ಮಾತನಾಡುತ್ತಾ ಸಾಗುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ವೈರಲ್ ಆಗುತ್ತಿದೆ. 

ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡುತ್ತಿರುವ ಫೋಟೋ ಹಂಚಿಕೊಂಡಿರುವ ಯೋಗಿ ಆದಿತ್ಯನಾಥ್, "ಆತ್ಮವನ್ನು ಜೊತೆಗಿಟ್ಟು ಹೊರಟಿದ್ದೇವೆ, ತನು,ಮನಗಳನ್ನು ಅರ್ಪಣೆ ಮಾಡಿದ್ದೇವೆ. ಅಂಬರವನ್ನೂ ಮೀರಿ ಎತ್ತರ ಸಾಗುವ ಗುರಿ ಹೊಂದಿದ್ದೇವೆ, ಹೊಸ ಭಾರತವನ್ನು ನಿರ್ಮಿಸಲಿದ್ದೇವೆ" ಎಂದು ಯೋಗಿ ಆದಿತ್ಯನಾಥ್ ತಮ್ಮ ಅಧಿಕೃತ ಟ್ವೀಟ್ ಖಾತೆಯಲ್ಲಿ ಹೇಳಿದ್ದಾರೆ. 

ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯವನ್ನು ಯಶಸ್ವಿಯಾಗಿ, ಜನಪ್ರಿಯವಾಗಿ ಮುನ್ನಡೆಸಿರುವ ಸಿಎಂ ಯೋಗಿ ಆದಿತ್ಯನಾಥ್ ಬಿಜೆಪಿಯಲ್ಲಿಯೂ ಈಗ ಜನಪ್ರಿಯ ನಾಯಕ ಹಾಗೂ ಭವಿಷ್ಯದಲ್ಲಿ ಬಲಿಷ್ಠ ಪಾತ್ರ ವಹಿಸುವುದು ನಿಶ್ಚಿತ ಎಂದು ವಿಶ್ಲೇಷಿಸಲಾಗುತ್ತಿದೆ. 

ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಸಂದೇಶದಲ್ಲಿ ಹೊಸ ಭಾರತದ ನಿರ್ಮಾಣದ ಉಲ್ಲೇಖ ಮಾಡಿರುವುದು ಪಕ್ಷದಲ್ಲಿ ತಮ್ಮ ಭವಿಷ್ಯದ ಹಾಗೂ ಪ್ರಧಾನಿ ಮೋದಿ ಈಗಾಗಲೇ ತಮ್ಮ ಉತ್ತರಾಧಿಕಾರಿಯ ಹುಡುಕಾಟದಲ್ಲಿ ತೊಡಗಿದ್ದಾರಾ? ಎಂಬ ಹಲವು ಪ್ರಶ್ನೆಗಳನ್ನು ಮೂಡಿಸುತ್ತಿದೆ.
 
71 ರ ವಯಸ್ಸಿನ ಮೋದಿಗೆ ಬಿಜೆಪಿಯಲ್ಲಿ ಎದುರಾಡುವವರು ಸದ್ಯಕ್ಕಂತೂ ಯಾರೂ ಇಲ್ಲ. ಹಾಗೂ ಅವರೇ ಬಿಜೆಪಿಯ ಅತ್ಯಂತ ಜನಪ್ರಿಯ ನಾಯಕ.

ಆದರೆ ಸಹಜವಾಗಿ ಅವರಿಗೆ ವಯಸ್ಸಾಗುತ್ತಿರುವುದು ಮೋದಿ ನಂತರ ಯಾರು ಎಂಬ ಪ್ರಶ್ನೆಯನ್ನು ಮೂಡಿಸುತ್ತದೆ. ಈ ಪ್ರಶ್ನೆ ಉದ್ಭವಿಸಿದಾಗ ಹೊಸ ನಾಯಕನ ಹುಡುಕಾಟದಲ್ಲಿ ಬಿಜೆಪಿಗೆ ಹಿನ್ನೆಡೆಯಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಅಷ್ಟೇ ಅಲ್ಲದೇ ಬಿಜೆಪಿ ನಾಯಕರು ಮೋದಿ ಅವರ ಉತ್ತರಾಧಿಕಾರಿ ಆಯ್ಕೆಯ ವಿಷಯ ಮಾತನಾಡುವುದಕ್ಕೆ ಸಮಯ ಇನ್ನೂ ಬಹಳಷ್ಟಿದೆ ಎಂದು ಬಹಿರಂಗವಾಗಿ ಹೇಳುತ್ತಿದ್ದರೂ, ಆಂತರ್ಯದಲ್ಲಿ ಬಿಜೆಪಿಯ ಜನಪ್ರಿಯ ನಾಯಕನಾಗಿ ಯೋಗಿ ಆದಿತ್ಯನಾಥ್ ಅವರ ಉದಯವನ್ನು ಒಪ್ಪುತ್ತಿದ್ದಾರೆ. 

ಇತ್ತೀಚೆಗಷ್ಟೇ ನಡೆದ ಕಾರ್ಯಕಾರಣಿ ಸಭೆಯಲ್ಲಿ ಭೌತಿಕವಾಗಿ ಭಾಗವಹಿಸುವುದಕ್ಕೆ ಬಿಜೆಪಿ ಸಿಎಂ ಗಳ ಪೈಕಿ ಯೋಗಿ ಆದಿತ್ಯನಾಥ್ ಅವರಿಗಷ್ಟೇ ಆಹ್ವಾವನವಿದ್ದದ್ದು ಎಂಬ ಅಂಶವೂ ಈ ಮೇಲಿನ ಎಲ್ಲಾ ವಿಷಯಗಳಿಗೂ ಪೂರಕವಾಗಿದೆ ಎಂಬುದು ಗಮನಾರ್ಹ ಸಂಗತಿ.

ಇದಿಷ್ಟೇ ಅಲ್ಲ ಪಕ್ಷದಲ್ಲಿ ಈ ಎರಡು ವರ್ಷಗಳಲ್ಲಿ ಪ್ರಮುಖ ನಿರ್ಣಯಗಳನ್ನು ಮಂಡಿಸಿ ಪ್ರಸ್ತಾಪಿಸುತ್ತಿದ್ದವರು ರಾಜನಾಥ್ ಸಿಂಗ್, ಆದರೆ ಇತ್ತೀಚಿನ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪಕ್ಷದ ನಿರ್ಣಯಗಳ ಪ್ರಸ್ತಾವ ಹಾಗೂ ಮಂಡನೆಯನ್ನು ಸಿಎಂ ಯೋಗಿ ಆದಿತ್ಯನಾಥ್ ಅವರಿಂದ ಮಾಡಿಸಲಾಗಿತ್ತು.
 
ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಮೋದಿ ಅವರ ಆತ್ಮೀಯ ನಡಿಗೆಯ ಫೋಟೋವನ್ನು ಜನರಂತೂ ಸಾಮಾಜಿಕ ಜಾಲತಾಣದಲ್ಲಿ ಭರ್ಜರಿಯಾಗಿ ಹಂಚಿಕೊಳ್ಳುತ್ತಿರುವುದು ಇಬ್ಬರೂ ನಾಯಕರ ಜನಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com