ಸಂಸತ್ತು
ಸಂಸತ್ತು

ತಿದ್ದುಪಡಿ ಕೃಷಿ ಕಾಯ್ದೆಗಳನ್ನು ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನವೇ ಮಂಡಿಸಲಾಗುವುದು: ಕೇಂದ್ರ ಕೃಷಿ ಸಚಿವ

ಕಳೆದ ವರ್ಷ ಕೇಂದ್ರ ಸರ್ಕಾರ ತಂದಿದ್ದ ಮೂರು ತಿದ್ದುಪಡಿ ಕೃಷಿ ಕಾನೂನುಗಳನ್ನು ಹಿಂಪಡೆಯಲು ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನದ ಕಲಾಪದಲ್ಲಿಯೇ ಮಂಡಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಹೇಳಿದ್ದಾರೆ.
Published on

ನವದೆಹಲಿ: ಕಳೆದ ವರ್ಷ ಕೇಂದ್ರ ಸರ್ಕಾರ ತಂದಿದ್ದ ಮೂರು ತಿದ್ದುಪಡಿ ಕೃಷಿ ಕಾನೂನುಗಳನ್ನು(Three farm law) ಹಿಂಪಡೆಯಲು ಸಂಸತ್ತಿನ ಚಳಿಗಾಲ ಅಧಿವೇಶನದ ಮೊದಲ ದಿನದ ಕಲಾಪದಲ್ಲಿಯೇ ಮಂಡಿಸಲಾಗುವುದು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ಹೇಳಿದ್ದಾರೆ.

ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಸಮಿತಿ ರಚನೆಯ ಮೂಲಕ ಕನಿಷ್ಠ ಬೆಂಬಲ ಬೆಲೆ(MSP)ನಿಗದಿಪಡಿಸಬೇಕೆಂಬ ರೈತರ ಬೇಡಿಕೆಯನ್ನು ಸರ್ಕಾರ ಮುಂದಿನ ದಿನಗಳಲ್ಲಿ ಈಡೇರಿಸಲಿದೆ ಎಂದರು.

ಮೂರು ತಿದ್ದುಪಡಿ ಕೃಷಿ ಕಾಯ್ದೆಯನ್ನು ಹಿಂಪಡೆಯುವುದಾಗಿ ಖುದ್ದು ಪ್ರಧಾನ ಮಂತ್ರಿಯವರೇ ಘೋಷಿಸಿದ ನಂತರವೂ ರೈತ ಸಂಘಟನೆಗಳು ಪ್ರತಿಭಟನೆ ಮುಂದುವರಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ರೈತರು ಪ್ರತಿಭಟನೆ ಕೊನೆಗೊಳಿಸಿ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿ ಎಂದು ಸಹ ಇದೇ ಸಂದರ್ಭದಲ್ಲಿ ಮನವಿ ಮಾಡಿಕೊಂಡರು. 

ಬೆಳೆ ವೈವಿಧ್ಯೀಕರಣ, ಶೂನ್ಯ-ಬಜೆಟ್ ಕೃಷಿ ಮತ್ತು ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿ ಮಾಡುವ ವಿಷಯಗಳ ಕುರಿತು ಚರ್ಚಿಸಲು ಸಮಿತಿಯನ್ನು ರಚಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಈ ಸಮಿತಿಯಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳಿರುತ್ತಾರೆ ಎಂದು ಹೇಳಿದರು.

ರೈತರು ಹುಲ್ಲು ಸುಡುವುದು ಸೇರಿದಂತೆ ಕೃಷಿತ್ಯಾಜ್ಯಗಳನ್ನು ಸುಡುವುದು ಅಪರಾಧವಲ್ಲವೆಂದು ಮಾನ್ಯಗೊಳಿಸಬೇಕೆಂದು ರೈತ ಸಂಘಟನೆಗಳು ಮಾಡಿಕೊಂಡಿದ್ದ ಬೇಡಿಕೆಯನ್ನು ಸಹ ಕೇಂದ್ರ ಸರ್ಕಾರ ಸ್ವೀಕರಿಸಿದೆ ಎಂದರು.

ಇನ್ನು ಪ್ರತಿಭಟನೆ ಮೇಲೆ ಕೇಸು ದಾಖಲಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳ ವ್ಯಾಪ್ತಿಗೆ ಬರುವುದರಿಂದ ಆಯಾ ಸರ್ಕಾರಗಳೇ ನಿರ್ಧಾರ ತೆಗೆದುಕೊಳ್ಳುತ್ತವೆ. ರಾಜ್ಯ ಸರ್ಕಾರಗಳೇ ಪರಿಹಾರಗಳ ಬಗ್ಗೆ ತಮ್ಮ ರಾಜ್ಯದ ನೀತಿ ನಿಯಮಗಳಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳಲಿವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com