ಅರ್ಹ ರೈಲ್ವೆ ನೌಕರರಿಗೆ ದಸರಾ ಬಂಪರ್: 78 ದಿನಗಳ ಬೋನಸ್ ಘೋಷಿಸಿದ ಕೇಂದ್ರ ಸಂಪುಟ!
ನವದೆಹಲಿ: ಪತ್ರಾಂಕಿತರಲ್ಲದ (ನಾನ್- ಗೆಜೆಟೆಡ್) ಅರ್ಹ ರೈಲ್ವೆ ನೌಕರರಿಗೆ 78 ದಿನಗಳ ವೇತನಕ್ಕೆ ಸಮಾನವಾದ ಬೋನಸ್ ನೀಡಲು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.
2020-21 ನೇ ಆರ್ಥಿಕ ವರ್ಷದ ಬೋನಸ್ ನ್ನು ಸುಮಾರು 11.56 ಲಕ್ಷ ನಾನ್ - ಗೆಜೆಟೆಡ್ ರೈಲ್ವೆ ನೌಕರರು ಪಡೆದುಕೊಳ್ಳಲಿದ್ದಾರೆ. ಇದರಿಂದಾಗಿ ಸರ್ಕಾರಕ್ಕೆ ಸುಮಾರು 1.985 ಕೋಟಿ ವೆಚ್ಚ ತಗುಲಲಿದೆ. ದಸರಾ ಮತ್ತು ದುರ್ಗಾ ಪೂಜೆ ಹಿನ್ನೆಲೆಯಲ್ಲಿ ಸಾಮಾನ್ಯವಾಗಿ ಬೋನಸ್ ಘೋಷಿಸಲಾಗುತ್ತದೆ.
ಅರ್ಹ ನಾನ್- ಗೆಜೆಟೆಡ್ ರೈಲ್ವೆ ನೌಕರರಿಗೆ ಪಿಎಲ್ ಬಿ ಪಾವತಿಸಲು ಮಾಸಿಕ 7000 ರೂ.ಗಳ ವೇತನ ಮಿತಿಯನ್ನು ನಿಗದಿಪಡಿಸಲಾಗಿದೆ. ಅರ್ಹ ರೈಲ್ವೆ ಉದ್ಯೋಗಿಗೆ 78 ದಿನಗಳಿಗೆ ಪಾವತಿಸುವ ಗರಿಷ್ಠ ಮೊತ್ತ 17,951 ರೂಪಾಯಿ. ಸರ್ಕಾರದ ಈ ನಿರ್ಧಾರದಿಂದ ಸುಮಾರು 11.56 ಲಕ್ಷ ನಾನ್ -ಗೆಜೆಟೆಡ್ ರೈಲ್ವೆ ಸಿಬ್ಬಂದಿಗೆ ಪ್ರಯೋಜನ ದೊರೆಯುವ ಸಾಧ್ಯತೆಯಿದೆ.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈಲ್ವೆ ಮಂಡಳಿ ಅಧ್ಯಕ್ಷರಾದ ಸುನೀತ್ ಶರ್ಮಾ, ಪ್ರತಿವರ್ಷದಂತೆ ಈ ವರ್ಷವೂ ದಸರಾಕ್ಕೂ ಮುನ್ನ ಬೋನಸ್ ವಿತರಿಸಲಾಗುವುದು ಎಂದು ತಿಳಿಸಿದರು.
ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಅನೇಕ ರೈಲ್ವೆ ಉದ್ಯೋಗಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿಯ ಭಯದ ಹೊರತಾಗಿಯೂ ಈಗಲೂ ಕೆಲಸ ಮಾಡುತ್ತಿದ್ದಾರೆ. ಅಂತವರನ್ನು ಪ್ರೋತ್ಸಾಹಿಸಲು ಬೋನಸ್ ನೀಡಲಾಗುತ್ತಿದೆ ಎಂದು ಹೇಳಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ