
ಭಾರತ-ಚೀನಾ
ನವದೆಹಲಿ: ಲಡಾಖ್ ವಿವಾದದ ವಿಷಯವಾಗಿ ಭಾರತ-ಚೀನಾ 13 ನೇ ಸುತ್ತಿನ ಮಾತುಕತೆ ನಡೆಸಲು ಸಜ್ಜುಗೊಂಡಿವೆ.
ಚೀನಾ ಭಾಗದಲ್ಲಿರುವ ಎಲ್ಎಸಿಯ ಮೋಲ್ಡು (ಚುಸುಲ್) ನಲ್ಲಿ ಮಾತುಕತೆ ನಡೆಯಲಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ. ಸಭೆಯಲ್ಲಿ ಹಾಟ್ ಸ್ಪ್ರಿಂಗ್ಸ್ ನಲ್ಲಿ ಘರ್ಷಣೆ ಕೇಂದ್ರಗಳಲ್ಲಿನ ವಿವಾದಗಳನ್ನು ಬಗೆಹರಿಸುವ ಸಂಬಂಧ ಚರ್ಚೆ ನಡೆಯಲಿದೆ.
ಈಶಾನ್ಯ ಲಡಾಖ್ ನ ಎಲ್ಒಸಿಗಳಲ್ಲಿ ದ್ವಿಪಕ್ಷೀಯ ಒಪ್ಪಂದ, ಶಿಷ್ಟಾಚಾರಗಳನ್ನು ಪಾಲಿಸುವ ಮೂಲಕ ಬಾಕಿ ಉಳಿದಿರುವ ವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚೀನಾ ಕಾರ್ಯನಿರ್ವಹಣೆ ಮಾಡುವ ನಿರೀಕ್ಷೆ ಇದೆ ಎಂದು 13 ನೇ ಸುತ್ತಿನ ಮಾತುಕತೆಗೂ ಮುನ್ನ ವಿದೇಶಾಂಗ ಇಲಾಖೆ ಹೇಳಿತ್ತು.
ವಾರದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ್ದ ಎಂಇಎ ವಕ್ತಾರ ಅರಿಂದಮ್ ಬಗಚಿ "ಈಶಾನ್ಯ ಲಡಾಖ್ ನಲ್ಲಿ ಬಾಕಿ ಉಳಿದಿರುವ ವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಚೀನಾ ಕಾರ್ಯನಿರ್ವಹಣೆ ಮಾಡುವ ನಿರೀಕ್ಷೆ ಇದೆ" ಎಂದು ಹೇಳಿದ್ದರು.
ಇದಕ್ಕೂ ಮುನ್ನ ತಜಕಿಸ್ತಾನದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಶಾಂಘೈ ಸಹಕಾರ ಸಂಘದ ಶೃಂಗಸಭೆಯಲ್ಲಿ ಚೀನಾದ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ ಎಲ್ಎಸಿಯಾದ್ಯಂತ ಸೇನಾ ಹಿಂತೆಗೆತ ಹಾಗೂ ಗಡಿ ಪರಿಸ್ಥಿತಿ ಉದ್ವಿಗ್ನತೆ ಬಗ್ಗೆ ಮಾತನಾಡಿದ್ದರು.
ಕಳೆದ ವರ್ಷ ಚೀನಾ ಈಶಾನ್ಯ ಲಡಾಖ್ ನಲ್ಲಿ ಅತಿಕ್ರಮಣ ಪ್ರವೇಶ ಮಾಡಲು ಯತ್ನಿಸಿದ್ದ ಪರಿಣಾಮ ಭಾರತೀಯ ಸೇನೆಯಿಂದ ತೀಕ್ಷ್ಣ ಪ್ರತಿಕ್ರಿಯೆ ಎದುರಿಸಿ ಅಪಾರ ಹಾನಿ ಎದುರಿಸಿತ್ತು.